ಬೆಂಗಳೂರು: ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಬಿ ಖಾತಾ ಗೊಂದಲಕ್ಕೆ ತೆರೆ ಎಳೆಯಲು ಸರ್ಕಾರ ಮುಂದಾಗಿದ್ದು, ಬಿ ಖಾತಾ ನಿವೇಶನಗಳಿಗೆ ಎ ಖಾತಾ ನೀಡುವ ಬಗ್ಗೆ ಜುಲೈ 17ರ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಅದರಂತೆ 2024ರ ಸೆಪ್ಟೆಂಬರ್ 30ರವರೆಗೆ ಬಿಬಿಎಂಪಿ ನೀಡಿರುವ ಬಿ ಖಾತೆಗಳಿಗೆ ಅಧಿಕೃತ ಖಾತಾ ನೀಡುವ ಬಗ್ಗೆ ಆದೇಶದಲ್ಲಿ ತಿಳಿಸಲಾಗಿದೆ.
ಹಲವು ವರ್ಷಗಳಿಂದ ಕಾನೂನು ಮಾನ್ಯತೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದ ಬಿ ಖಾತಾದಾರರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಬಿ ಖಾತಾಗಳನ್ನು ಪರಿಗಣಿಸಲು ನಿರ್ಧಾರ ಕೈಗೊಂಡಿದೆ. ಕಳೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಅಂತೆಯೇ 2024ರ ಸೆಪ್ಟೆಂಬರ್ 30 ಕ್ಕಿಂತ ಮುಂಚಿತವಾಗಿ ಬಿ ಖಾತಾ ಅಡಿಯಲ್ಲಿ ನಿರ್ಮಿಸಲಾದ ಕಟ್ಟಡಗಳಿಗೆ ಎ ಖಾತಾ ಅಥವಾ ಬಿ ಖಾತಾ ವನ್ನೇ ಸಕ್ರಮ ಖಾತಾ ಎಂದು ಪರಿಗಣಿಸುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.