ರಾಯಚೂರು: ಫುಡ್ ಪಾಯಿಸನ್ ನಿಂದ ತಂದೆ, ಮಗಳು ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕೆ. ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.
ತಂದೆ ರಮೇಶ(35), ಮಗಳು ನಾಗಮ್ಮ(8) ಮೃತಪಟ್ಟವರು ಎಂದು ಹೇಳಲಾಗಿದೆ. ಊಟ ಸೇವಿಸಿದ ಬಳಿಕ ಹೊಟ್ಟೆನೋವು ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದ ತಂದೆ, ಮಗಳು ಸಾವನ್ನಪ್ಪಿದ್ದಾರೆ. ಅಸ್ವಸ್ಥಗೊಂಡಿದ್ದ ಪತ್ನಿ ಮತ್ತು ಮೂವರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪತ್ನಿ ಪದ್ಮಾವತಿ(34), ಮಗಳು ದೀಪಾ(6) ಸ್ಥಿತಿ ಗಂಭೀರವಾಗಿದೆ. ಇಬ್ಬರಿಗೂ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳಾದ ಕೃಷ್ಣ, ಚೈತ್ರಾ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ರಾತ್ರಿ ಚವಳಿಕಾಯಿ ಪಲ್ಯ, ರೊಟ್ಟಿ, ಅನ್ನ, ಸಾಂಬಾರ್ ಸೇವಿಸಿದ್ದರು. ಊಟ ಮಾಡಿ ಮಲಗಿದ್ದ ಆರು ಜನರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೊಟ್ಟೆ ನೋವಿನಿಂದ ನರಳುತ್ತಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಂಜಾನೆ 4 ಸುಮಾರಿಗೆ ಲಿಂಗಸಗೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ತಂದೆ ರಮೇಶ, ಪುತ್ರಿ ನಾಗಮ್ಮ ಸಾವನ್ನಪ್ಪಿದ್ದಾರೆ. ನಾಲ್ವರ ಪೈಕಿ ತಾಯಿ, ಮಗಳನ್ನು ರಿಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಕೆ. ತಿಮ್ಮಾಪುರ ಗ್ರಾಮದಲ್ಲಿ ಇಬ್ಬರ ಸಾವು ಆತಂಕ ಮೂಡಿಸಿದೆ. ಕವಿತಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.