ಬೆಂಗಳೂರು: 1.25 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಮಹಿಳಾ ಪಿಎಸ್ಐ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಗೋವಿಂದಪುರ ಪೊಲೀಸ್ ಠಾಣೆಯ ಪಿಎಸ್ಐ ಸಾವಿತ್ರಿಬಾಯಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಲು ವ್ಯಕ್ತಿಯೊಬ್ಬರಿಂದ 1.25 ಲಕ್ಷ ರೂ. ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಹೆಚ್.ಬಿ.ಆರ್. ಲೇಔಟ್ ನಿವಾಸಿ ಮೊಹಮದ್ ಯೂನಸ್ ಎಂಬುವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಸೋಮವಾರ ಲಂಚ ಸ್ವೀಕರಿಸುವಾಗ ಸಾವಿತ್ರಿಬಾಯಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದೂರುದಾರ ಮೊಹಮದ್ ಯುವತಿಯೊಬ್ಬಳನ್ನು ಪ್ರೀತಿಸಿದ್ದು, ಇಬ್ಬರು 4 ವರ್ಷ ಒಂದೇ ಮನೆಯಲ್ಲಿ ಸಹ ಜೀವನ ನಡೆಸುತ್ತಿದ್ದರು. ಕೆಲವು ದಿನಗಳ ನಂತರ ಮೊಹಮ್ಮದ್ ಗೆ ಬೇರೆ ಯುವತಿ ಜೊತೆಗೆ ಈ ಮೊದಲೇ ಮದುವೆಯಾಗಿರುವ ವಿಚಾರ ಯುವತಿಗೆ ಗೊತ್ತಾಗಿ ಈ ಬಗ್ಗೆ ಪ್ರಶ್ನಿಸಿದಾಗ ಗಲಾಟೆ ನಡೆದು ಹಲ್ಲೆ ಮಾಡಿದ್ದ. ಯುವತಿ ಮೊಹಮ್ಮದ್ ವಿರುದ್ಧ ಕೆಜಿ ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣದ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.
ಈ ನಡುವೆ ಮೇ 5ರಂದು ಮೊಹಮ್ಮದ್ ಯುವತಿಗೆ ಕರೆ ಮಾಡಿ ಮಾತನಾಡುವುದಿದೆ ಬಾ ಎಂದು ಹೆಚ್.ಬಿ.ಅರ್. ಲೇಔಟ್ ನ ಮನೆಗೆ ಕರೆಸಿಕೊಂಡಿದ್ದಾನೆ. ಕೆಜಿ ಹಳ್ಳಿ ಠಾಣೆಗೆ ನೀಡಿರುವ ದೂರು ಹಿಂಪಡೆಯುವಂತೆ ಹೇಳಿದ್ದಾನೆ. ಯುವತಿ ನಿರಾಕರಿಸಿದಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ. ನಂತರ ಆತನೇ ಸ್ಥಳೀಯರ ನೆರವಿನಿಂದ ಯುವತಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಅಪಘಾತವಾಗಿದೆ ಎಂದು ಸುಳ್ಳು ಹೇಳಿ ಚಿಕಿತ್ಸೆ ಕೊಡಿಸಿದ್ದಾನೆ ಎಂದು ಯುವತಿ ಗೋವಿಂದಪುರ ಪೋಲಿಸ್ ಠಾಣೆಗೆ ಮೊಹಮ್ಮದ್ ವಿರುದ್ಧ ದೂರು ನೀಡಿದ್ದಳು.
ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊಹಮ್ಮದ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ಪ್ರಕರಣದಲ್ಲಿ ಕೋರ್ಟ್ ಗೆ ಬಿ ರಿಪೋರ್ಟ್ ಸಲ್ಲಿಸಲು ಮಹಿಳಾ ಪಿಎಸ್ಐ ಸಾವಿತ್ರಿಬಾಯಿ 1.25 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮೊಹಮ್ಮದ್ ಯೂನಸ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ಸೋಮವಾರ ಲಂಚ ಸ್ವೀಕರಿಸುವಾಗಲೇ ದಾಳಿ ನಡೆಸಿ ಹಣದ ಸಮೇತ ಪಿಎಸ್ಐ ಸಾವಿತ್ರಿಬಾಯಿ ಅವರನ್ನು ಬಂಧಿಸಿ ತನಿಖೆ ನಡೆಸಲಾಗಿದೆ.