ಬೆಂಗಳೂರು: ಭೂಸ್ವಾಧೀನ ಪ್ರಕ್ರಿಯೆ ವಿಚಾರದಲ್ಲಿ ಕೆಲವು ಅಧಿಕಾರಿಗಳ ತಪ್ಪಿನಿಂದ ಹಾಗೂ ಅವೈಜ್ಞಾನಿಕ ನೀತಿಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಸೆಂಟ್ರಲ್ ಕಾಲೇಜು ಸಭಾಂಗಣದಲ್ಲಿ ರಾಜ್ಯದ ಎಲ್ಲ ಉಪ ವಿಭಾಗಾಧಿಕಾರಿಗಳಿಗೆ ಏರ್ಪಡಿಸಿದ್ದ ಭೂಸ್ವಾಧೀನ ಹಾಗೂ ನ್ಯಾಯಾಲಯ ಪ್ರಕರಣಗಳ ವ್ಯವಹಾರ ಕುರಿತ ವಿಶೇಷ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಭೂ ಸ್ವಾಧೀನ ಹಾಗೂ ಜಮೀನು ಮಾಲೀಕರಿಗೆ ಪರಿಹಾರ ನೀಡುವ ವಿಚಾರದಲ್ಲಿ ರಾಜ್ಯದಲ್ಲಿ ಹಿಂದಿನಿಂದಲೂ ಭಾರಿ ತಪ್ಪುಗಳು ನಡೆಯುತ್ತಿಸಲೇ ಇವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.
ಅಧಿಕಾರಿಗಳ ತಪ್ಪಿನಿಂದ ಕೃಷ್ಣ ಮೇಲ್ದಂಡೆ ಯೋಜನೆಯಲ್ಲಿ ಭೂಸ್ವಾಧೀನಕ್ಕೆ 2.01 ಲಕ್ಷ ಕೋಟಿ ರೂ. ಬೇಕಾಗುತ್ತದೆ. ಅಧಿಕಾರಿಗಳ ಬೇಜಾವಾಬ್ದಾರಿಯಿಂದ ಸರ್ಕಾರಕ್ಕೆ 1 ಲಕ್ಷ ಕೋಟಿ ರೂ.ನಷ್ಟು ನಷ್ಟವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೃಷ್ಣ ಮೇಲ್ದಂಡೆ ಯೋಜನೆಯ ಭೂಸ್ವಾಧೀನಕ್ಕೆ ಕ್ಯಾಬಿನೆಟ್ ನಲ್ಲಿ 17000 ಕೋಟಿ ರೂ.ಗೆ ಒಪ್ಪಿಗೆ ಪಡೆಯಲಾಗಿದೆ. ಆದರೆ ಯೋಜನೆಯ ಅಂದಾಜು ಒಟ್ಟು ವೆಚ್ಚ 51,000 ಕೋಟಿ ರೂಪಾಯಿಗಳು. ಭೂಸ್ವಾಧೀನಕ್ಕೆ 2.01 ಲಕ್ಷ ಕೋಟಿ ರೂ. ಸರ್ಕಾರದ ಬೊಕ್ಕಸದಿಂದ ಕರಗಿ ಹೋಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಭೂಸ್ವಾಧೀನವಾದ ಜಮೀನಿಗೆ ಅಧಿಕಾರಿಗಳು ನಿಗದಿಪಡಿಸಿದ್ದ ಪರಿಹಾರದ ದರವನ್ನು ನ್ಯಾಯಾಲಯ ಹಲವು ಪಟ್ಟು ಹೆಚ್ಚಳ ಮಾಡಿದೆ. ಮುಳುಗಡೆ ಭೂಮಿಗೆ ಎಕರೆಗೆ 1.26 ಕೋಟಿ ರೂಪಾಯಿ, ಕಾಲುವೆ ಭೂಸ್ವಾಧೀನ ಭೂಮಿಗೆ ಎಕರೆಗೆ 74 ಲಕ್ಷ ರೂ., ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಭೂಮಿಗೆ ಎಕರೆಗೆ 23.50 ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ. ಈಗಾಗಲೇ 29,400 ಎಕರೆ ಭೂ ಸ್ವಾಧೀನಗೊಂಡಿದ್ದು, 66 ಸಾವಿರ ಕೋಟಿ ರೂಗಳನ್ನು ಪರಿಹಾರವಾಗಿ ನೀಡಬೇಕಿದೆ. ಇನ್ನೂ 1.04 ಲಕ್ಷ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದ್ದು, ಅಷ್ಟು ಜಮೀನಿಗೆ ನ್ಯಾಯಾಲಯ ನಿಗದಿಪಡಿಸಿದ ದರದಲ್ಲೇ ಪರಿಹಾರ ನೀಡಿದರೂ 2.01 ಲಕ್ಷ ಕೋಟಿ ರೂಪಾಯಿ ಖರ್ಚಾಗುತ್ತದೆ. ಇದಕ್ಕೆ ಯಾರು ಹೊಣೆ? ಯಾವ ಸರ್ಕಾರದಿಂದ ಇಷ್ಟು ಹಣ ನೀಡಲು ಸಾಧ್ಯ ಎಂದು ಹೇಳಿದ್ದಾರೆ.
ಈ ವಿಚಾರದಲ್ಲಿ ಕೃಷ್ಣಭಾಗ್ಯ ಜಲ ನಿಗಮ, ಸರ್ಕಾರದ ವಕೀಲರು, ಜನಪ್ರತಿನಿಧಿಗಳ ತಪ್ಪು ಇದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಮಹತ್ವದ ಕೃಷ್ಣ ಮೇಲ್ದಂಡೆ ಯೋಜನೆ ಭವಿಷ್ಯ ಏನಾಗುತ್ತದೆ ಎಂದು ಕೃಷ್ಣಬೈರೇಗೌಡ ಪ್ರಶ್ನಿಸಿದ್ದಾರೆ.
ಜಮೀನು ಮಾಲೀಕರಿಗೆ 2017ರ ಪರಿಷ್ಕೃತ ದರದ ಪರಿಹಾರ ನೀಡಬೇಕಾದ ಪ್ರಕರಣದಲ್ಲಿ 2023ರ ಪರಿಷ್ಕೃತ ದರ ನೀಡಿದ್ದಾರೆ. ಎಲ್ಲಾ ಸರ್ವೇ ನಂಬರ್ ಗಳ ನೀರಾವರಿ ಮತ್ತು ಖುಷ್ಕಿ ಜಮೀನುಗಳಿಗೆ ನಿಯಮ ಮೀರಿ ಒಂದೇ ದರ ನಿಗದಿ ಮಾಡಲಾಗಿದೆ. ಅಭಿವೃದ್ಧಿಪಡಿಸದ ಭೂಮಿಯ ಪೈಕಿ ಶೇಕಡ 55 ರಷ್ಟು ಭೂಮಿಗೆ ಮಾತ್ರ ಪರಿಹಾರ ನೀಡಬೇಕೆಂಬ ನಿಯಮ ಮೀರಿ ಶೇಕಡ 100ರಷ್ಟು ಪರಿಹಾರ ನೀಡಲಾಗಿದೆ ಎಂದು ಹೇಳಲಾಗಿದೆ.