ಎಸ್ ಬಿಐ ಬ್ಯಾಂಕ್ ಗೆ 8 ಕೋಟಿ ವಂಚನೆ: ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮಹಿಳೆ ಕೊನೆಗೂ ಅರೆಸ್ಟ್

ನವದೆಹಲಿ: ಬೆಂಗಳೂರಿನ ಎಸ್ ಬಿಐ ಬ್ಯಾಂಕ್ ಗೆ 8 ಕೋಟಿ ರೂಪಾಯಿ ವಂಚನೆ ಮಾಡಿ ಬರೋಬ್ಬರಿ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮಹಿಳೆಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ಮಣಿ ಎಂ.ಶೇಖರ್ (48) ಬಂಧಿತ ಮಹಿಳೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಮಧ್ಯಪ್ರದೇಶದ ಇಂಧೋರ್ ನಲ್ಲಿ ಮಹಿಳೆಯನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಎಸ್ ಬಿಐ ಬ್ಯಾಂಕ್ ನಲ್ಲಿ 2003ರಿಂದ 2005ರ ಅವಧಿಯಲ್ಲಿ ಮಣಿ ಹಾಗೂ ಅವರ ಪತಿ ಶೇಖರ್ ಗೃಹ ಉದ್ಯಮದ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದಿದ್ದರು. ಸಾಲ ಪಡೆದ ಬಳಿಕ ನಕಲಿ ದಾಖಲೆ ಎಂಬುದು ಗೊತ್ತಾಗಿದೆ. ಪ್ರಕರಣ ಸಿಬಿಐ ತನಿಖೆಗೆ ವಹಿಸಲಾಗಿತ್ತು. ಸಿಬಿಐ 2005ರಲ್ಲಿ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು. ಒಂದು ದಿನ ಮಾತ್ರ ವಿಚಾರಣೆಗೆ ಬಂದಿದ್ದ ಮಣಿ ಹಾಗೂ ಶೇಖರ್ ಪೊಲೀಸರ ಕಣ್ಣುತಪ್ಪಿಸಿ ಎಸ್ಕೇಪ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಇಬ್ಬರನ್ನೂ ಅಪರಾಧಿಗಳು ಎಂದು ಘೋಷಿಸಿತ್ತು.

ನಾಪತ್ತೆಯಾಗಿದ್ದ ಆರೋಪಿಗಳಿಗಾಗಿ ಸಿಬಿಐ ತೀವ್ರ ಹುಡುಕಾಟ ನಡೆಸಿತ್ತು. ಸುಳಿವು ನೀಡಿದವರಿಗೆ 1 ಲಕ್ಷ ಬಹುಮಾನ ಘೋಷಿಸಿತ್ತು. ಆದಾಗ್ಯೂ ಆರೋಪಿಗಳು ಪತ್ತೆಯಾಗಿರಲಿಲ್ಲ. ಇತ್ತೀಚೆಗೆ ಸಿಬಿಐ ಪ್ರಕರಣಗಳ ತನಿಖೆಗಳ ಸಹಾಯಕ್ಕಾಗಿ ಅತ್ಯಾಧುನಿಕ ಇಮೇಜ್ ಸರ್ಚ್ ಅನಾಲಿಟಿಕ್ಸ್ ಸಾಫ್ಟ್ ವೇರ್ ಬಳಸಿ ಮಣಿ ಹಾಗೂ ಶೇಖರ್ ಅವರ ಹಳೆಯ ಫೋಟೋಗಳನ್ನು ಇಟ್ಟುಕೊಂಡು ಇಂಟರ್ ನೆಟ್ ನಲ್ಲಿ ಹುಡುಕಾಟ ನಡೆಸಿದ್ದಾರೆ. ಇಮೇಜ್ ಸರ್ಚ್ ತಂತ್ರಜ್ಞಾನ ಶೇ.90ರಷ್ಟು ಸಾಮ್ಯತೆಯ ಸುಳಿವು ನೀಡಿದೆ. ಇದನ್ನು ಆಧರಿಸಿ ಇಂಧೋರ್ ನಲ್ಲಿ ಆರೋಪಿ ಮಹಿಳೆ ಇರುವುದನ್ನು ಪತ್ತೆ ಮಾಡಿದ್ದಾರೆ. ಮಣಿ ತನ್ನ ಹಳೆ ಹೆಸರು, ಗುರುತು ಮರೆಮಾಚಿ ಆರಾಮದಾಯಕವಾಗಿ ಜೀವನ ನಡೆಸುತ್ತಿದ್ದರು. ಸದ್ಯ ಆರೋಪಿ ಮಣಿಯನ್ನು ಬಂಧಿಸಿರುವ ಸಿಬಿಐ ವಿಚಾರಣೆಗೆ ಬೆಂಗಳೂರಿಗೆ ಕರೆತಂದಿದ್ದಾರೆ. ಪತಿ ಶೇಖರ್ 2008ರಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read