ಗುಜರಾತ್‌ನ ಭಾವನಗರದಲ್ಲಿ ನಡೆದ ಭೀಕರ ಘಟನೆಯೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೋಲೀಸ್ ಅಧಿಕಾರಿಯೊಬ್ಬರ 20 ವರ್ಷದ ಪುತ್ರ ತನ್ನ ಎಸ್.ಯು.ವಿ.ಯನ್ನು ಅತಿ ವೇಗವಾಗಿ ಓಡಿಸುತ್ತಾ, ರಸ್ತೆ ರೇಸ್‌ನಲ್ಲಿ ತೊಡಗಿ ಪಾದಚಾರಿಗಳು ಮತ್ತು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಈ ದುರಂತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕನಿಷ್ಠ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಥಳೀಯ ಅಪರಾಧ ವಿಭಾಗದ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ASI) ಅನಿರುದ್ಧ್ ಸಿಂಗ್ ವಾಜುಭಾ ಗೋಹಿಲ್ ಅವರ ಪುತ್ರನಾದ ಹರ್ಷರಾಜ್ ಸಿಂಗ್ ಗೋಹಿಲ್ (20), ತನ್ನ ಬಿಳಿ ಕ್ರೆಟಾ ಎಸ್‌ಯುವಿಯೊಂದಿಗೆ ಸ್ನೇಹಿತನ ಕೆಂಪು ಬ್ರೆಝಾ ಕಾರಿನ ಜೊತೆ ರೇಸ್ ಮಾಡುತ್ತಿದ್ದ ಎಂದು ವರದಿಗಳು ತಿಳಿಸಿವೆ. ಕಾಳಿಯಾಬೀಡ್ ಪ್ರದೇಶದ ಜನನಿಬಿಡ ರಸ್ತೆಯಲ್ಲಿ ಮಧ್ಯಾಹ್ನ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಸಿಸಿಟಿವಿ ದೃಶ್ಯಾವಳಿಗಳು ಅತಿ ವೇಗದಲ್ಲಿ ಸಾಗುತ್ತಿದ್ದ ಬಿಳಿ ಕ್ರೆಟಾ ಕಾರು ಇಬ್ಬರು ಪಾದಚಾರಿಗಳಿಗೆ ಡಿಕ್ಕಿ ಹೊಡೆದು ನಂತರ ಸ್ಕೂಟರ್‌ಗೆ ಅಪ್ಪಳಿಸುವುದನ್ನು ಸ್ಪಷ್ಟವಾಗಿ ತೋರಿಸುತ್ತವೆ. ಅಂದಾಜು 120 ರಿಂದ 150 ಕಿಲೋಮೀಟರ್ ಪ್ರತಿ ಗಂಟೆಗೆ ವೇಗದಲ್ಲಿ ಚಲಿಸುತ್ತಿದ್ದ ಹರ್ಷರಾಜ್, ಕೆಲವೇ ಸೆಕೆಂಡುಗಳಲ್ಲಿ ನಿಯಂತ್ರಣ ಕಳೆದುಕೊಂಡು ಇಬ್ಬರಿಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ರಸ್ತೆಯಲ್ಲಿ ಸ್ಕಿಡ್ ಆಗಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಸ್ಕೂಟರ್‌ನ ಟೈರುಗಳು ತಕ್ಷಣವೇ ಸ್ಫೋಟಗೊಂಡಿದ್ದು, ಅದರಲ್ಲಿ ಸವಾರರಾಗಿದ್ದ ಇಬ್ಬರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಹಲವು ಇತರೆ ವಾಹನಗಳಿಗೂ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾದಚಾರಿಗಳಾದ 30 ವರ್ಷದ ಭಾರ್ಗವ್ ಭಟ್ ಮತ್ತು 65 ವರ್ಷದ ಚಂಪಾಬೆನ್ ವಚಾನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರಾದ ಭಾರ್ಗವ್ ಭಟ್ ಕಳೆದ ವರ್ಷವಷ್ಟೇ ಮದುವೆಯಾಗಿದ್ದು, ಘಟನೆ ಸಂಭವಿಸಿದಾಗ ಕೆಲಸಕ್ಕೆ ಹೋಗುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅವರು ಮಧು ಸಿಲಿಕಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಹರ್ಷರಾಜ್‌ಗೆ ವಾಹನ ಚಾಲನೆಯ ಬಗ್ಗೆ ಆಸಕ್ತಿ ಇತ್ತು ಮತ್ತು ಆಗಾಗ್ಗೆ ತನ್ನ ಸ್ನೇಹಿತರೊಂದಿಗೆ ರೇಸ್‌ಗಳಲ್ಲಿ ಪಾಲ್ಗೊಳ್ಳುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
20 ವರ್ಷದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಆತನ ತಂದೆ, ಪೋಲೀಸ್ ಅಧಿಕಾರಿ ತಕ್ಷಣವೇ ಸ್ಥಳಕ್ಕೆ ಧಾವಿಸಿ, ತಮ್ಮ ಮಗನಿಗೆ ಥಳಿಸಿ, ನಂತರ ನೀಲಂಬಾಗ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.