ಬೆಂಗಳೂರು: ಆಸ್ತಿ ವಿಚಾರವಾಗಿ ಬೆಂಗಳೂರಿನಲ್ಲಿ ಸಿನಿಮಾ ಸ್ಟೈಲ್ ನಲ್ಲಿ ವ್ಯಕ್ತಿಯೊಬ್ಬರನ್ನು ಸ್ಕಾರ್ಪಿಯೋ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಕೋರ್ಟ್ ಬಳಿಯೇ ಈ ಘಟನೆ ನಡೆದಿದೆ. ಶ್ರೀನಿಧಿ ಎಂಬುವವರನ್ನು ದುಷ್ಕರ್ಮಿಗಳ ಗ್ಯಾಂಗ್ ಹಾಡಹಗಲೇ ಕಿಡ್ನ್ಯಾಪ್ ಮಾಡಿದ್ದು, ವಕೀಲ ನಂದೀಶ್ ಎಂಬುವವರೇ ಶ್ರೀನಿಧಿಯನ್ನು ಅಪಹರಿಸಿ, ಆಸ್ತಿ ಪತ್ರಗಳಿಗೆ ಸಹಿ ಹಾಕುವಂತೆ ಬೆದರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜುಲೈ 4ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪದ್ಮನಾಭರಾವ್ ಹಾಗೂ ವಾಬಸಂದ್ರ ನಿವಾಸಿ ಶ್ರೀನಿಧಿ ಎಂಬುವವರ ನಡುವೆ ಆಸ್ತಿ ವಿಚಾರವಾಗಿ ಜಟಾಪಟಿ ನಡೆಯುತ್ತಿತ್ತು. ಇದೇ ವಿಚಾರವಾಗಿ ವಕೀಲ ನಂದೀಶ್ ಎಂಬುವವರು ಪದ್ಮನಾಭರಾವ್ ಬಳಿ ಕೋಟಿ ಕೋಟಿ ಡೀಲ್ ಕುದುರಿಸಿಕೊಂಡು ನಿಮ್ಮ ಹೆಸರಿಗೆ ಮಾಡಿಸಿಕೊಡುವುದಾಗಿ ಮಾತುಕತೆ ನಡೆಸಿದ್ದರು. ಆಸ್ತಿ ವಿಚಾರದ ಚರ್ಚೆಗೆ ಶ್ರೀನಿಧಿ ಎಂಬುವವರನ್ನು ವಕೀಲ ನಂದೀಶ್ ತನ್ನ ಕಚೇರಿಗೆ ಕರೆದಿದ್ದರು. ನಂದೀಶ್ ಕಚೇರಿಗೆ ಬಂದು ಮಾತುಕತೆ ನಡೆಸಿ ಹೊರಬರುತ್ತಿದಂತೆ ಶ್ರೀನಿಧಿಯನ್ನು ಗ್ಯಾಂಗ್ ವೊಂದು ಕಿಡ್ನ್ಯಾಪ್ ಮಾಡಿದೆ.
ಬಳಿಕ ಅವರನ್ನು ಸರ್ಜಾಪುರ ಬಳಿಯ ಸಬ್ ರಿಜಿಸ್ಟರ್ ಕಚೇರಿಗೆ ಕರೆದೊಯ್ದು ಮನಬಂದಂತೆ ಹಲ್ಲೆ ನಡೆಸಿ ಪದ್ಮನಾಭ್ ಹೆಸರಿಗೆ ಆಸ್ತಿ ರಿಜಿಸ್ಟರ್ ಮಾಡುವಂತೆ ಒತ್ತಾಯಿಸಿದ್ದಾರೆ. ಸಬ್ ರಿಜಿಸ್ಟಾರ್ ಕಚೇರಿ ಒಳ ಹೋಗುತ್ತಿದ್ದಂತೆ ಶ್ರೀನಿಧಿ ತನ್ನನ್ನು ಕಿಡ್ನ್ಯಾಪ್ ಮಾಡಿ ಕರೆತಂದಿದ್ದಾಗಿ ಕಿರುಚಿಕೊಳ್ಳಲಾರಂಭಿಸಿದ್ದಾರೆ. ಅಲ್ಲದೇ ಪೊಲೀಸರಿಗೆ ಕರೆ ಮಾಡುವಂತೆ ಗಲಾಟೆ ಮಾಡಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಶ್ರೀನಿಧಿ ರಕ್ಷಿಸಿದ್ದಾರೆ ಎನ್ನಲಾಗಿದೆ. ವಕೀಲ ನಂದೀಶ್ ಹಾಗೂ ಗ್ಯಾಂಗ್ ತನ್ನನ್ನು ಕಿಡ್ನ್ಯಾಪ್ ಮಾಡಿದ್ದಾಗಿ ಶ್ರೀನಿಧಿ ಪೊಲೀಸರಿಗೆ ದೂರು ನೀಡಿದ್ದಾರೆ.