ಬೆಂಗಳೂರು: ಹೊಸದಾಗಿ ರಚನೆಯಾಗಿರುವ 5 ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ಘೋಷಣೆಯಾಗಿದೆ. ಆಗಸ್ಟ್ 17ರಂದು ಮತದಾನ ನಡೆಯಲಿದೆ.
ಕೋಲಾರ ಜಿಲ್ಲೆಯ ವೇಮಗಲ್ ಕುರುಗಲ್, ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ, ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಹಾವೇರಿಯ ರಟ್ಟೆಹಳ್ಳಿ ಹಾಗೂ ಕಲಬುರಗಿಯ ಕಾಳಗಿ ಪಟ್ಟಣ ಪಂಚಾಯಿತಿಗಳಿಗೆ ರಾಜ್ಯ ಚುನಾವಣಾ ಆಯೋಗದಿಂದ ಚುನಾವಣೆ ಘೋಷಣೆ ಮಾಡಲಾಗಿದೆ.
ಬೆಳಗಾವಿಯ ಉಗಾರಖುರ್ದು ಪುರಸಭೆ, ವಿಜಯಪುರದ ನಿಡಗುಂದಿ ಹಾಗೂ ರಾಯಚೂರಿನ ಸಿರವಾರ ಪಟ್ಟಣ ಪಂಚಾಯಿತಿಯ ತಲಾ ಒಂದು ವಾರ್ಡ್ ಗಳಿಗೆ ಉಪಚುನಾವಣೆ ಘೋಷಣೆ ಮಾಡಲಾಗಿದೆ.
ಜುಲೈ 29ರಂದು ಅಧಿಸೂಚನೆ ಹೊರಡಿಸಲಿದ್ದು, ಆಗಸ್ಟ್ 5 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಆಗಸ್ಟ್ 6ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಆಗಸ್ಟ್ 8 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಆಗಸ್ಟ್ 17ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಆಗಸ್ಟ್ 20ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.