ರಾಯಚೂರು: ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ನೇತೃತ್ವದಲ್ಲಿ ರಾಯಚೂರಿನಲ್ಲಿ ಕೆಡಿಪಿ ಸಭೆ ನಡೆದಿದ್ದು, ಸಭೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಯೊಬ್ಬರು ಮೊಬೈಲ್ ನಲ್ಲಿ ರಮ್ಮಿ ಆಡುವುದರಲ್ಲಿ ಮಗ್ನರಾಗಿದ್ದ ಪ್ರಸಂಗ ಬೆಳಕಿಗೆ ಬಂದಿದೆ.
ಅತ್ತ ಸಚಿವರು ಜಿಲ್ಲೆಯ ಪ್ರಗತಿ ಪರಿಶೀಲನೆ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸುತ್ತಿದ್ದರೆ, ಇತ್ತ ಸಭೆಯಲ್ಲಿ ಪಾಲ್ಗೊಂಡಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿಯೊಬ್ಬರು ಮೊಬೈಲ್ ನಲ್ಲಿ ರಮ್ಮಿ ಆಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಜಿಲ್ಲೆಯ ಜನರ ಸಮಸ್ಯೆ, ಸಂಕಷ್ಟ, ಅಭಿವೃದ್ಧಿ ಬಗ್ಗೆ ಚರ್ಚಿಸಬೇಕಾದ ಅಧಿಕಾರಿ ಬೇಜವಾಬ್ದಾರಿ ತೋರಿದ್ದು, ರಮ್ಮಿ ಆಟದಲ್ಲಿ ನಿರತರಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಸಚಿವರು ಒಂದೆಡೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಕ್ಕೆತರದ ಅಧಿಕಾರಿಗಳನ್ನು ಕ್ಲಾಸ್ ತೆಗೆದುಕೊಳ್ಳುತ್ತಿದ್ದರೆ, ಮತ್ತೊಂದೆಡೆ ಶಾಸಕರುಗಳ ನಡುವೆಯೇ ವಾಗ್ವಾದ ನಡೆದಿದೆ. ಸಭೆ ಮಧ್ಯೆದಲ್ಲಿ ಕುಳಿತಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಎಂಬುವವರು ತಮ್ಮ ಮೊಬೈಲ್ ನಲ್ಲಿ ಆರಾಮವಾಗಿ ರಮ್ಮಿ ಆಟದಲ್ಲಿ ಮಗ್ನರಾಗಿದ್ದಾರೆ. ಅಧಿಕಾರಿಯ ಕಳ್ಳಾಟ ಕ್ಯಾಮರಾ ಕಣ್ಣಿಗೆ ಬಿಳುತ್ತಿದ್ದಂತೆ ಮುಗುಳ್ನಕ್ಕು ಮೊಬೈಲ್ ಆಫ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಧಿಕಾರಿಯ ಬೇಜವಾಬ್ದಾರಿ ವೈರಲ್ ಆಗಿದೆ.