ಬೆಂಗಳೂರು : ರೌಡಿಶೀಟರ್ ‘ಬಿಕ್ಲು ಶಿವ’ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾದ ‘FIR’ ರದ್ದು ಕೋರಿ ಶಾಸಕ ಬೈರತಿ ಬಸವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಇಂದು ಮಧ್ಯಾಹ್ನ 2 : 30 ಕ್ಕೆ ತುರ್ತು ಅರ್ಜಿ ವಿಚಾರಣೆ ನಡೆಸುವಂತೆ ಹೈಕೋರ್ಟ್ ಗೆ ಬೈರತಿ ಬಸವರಾಜ್ ಪರ ವಕೀಲ ಸಂದೇಶ ಚೌಟ ಅರ್ಜಿ ಸಲ್ಲಿಸಿದ್ದಾರೆ. ಭೈರತಿ ಪರ ವಕೀಲರ ಮನವಿಗೆ ಎಸ್ ಪಿಪಿ ಬೆಳ್ಳಿಯಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್ ಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ.
ರೌಡಿಶೀಟರ್ ಶಿವಪ್ರಕಾಶ್ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಬೈರತಿ ಬಸವರಾಜ್ ಹೆಸರು ತಳುಕು ಹಾಕಿಕೊಂಡಿದ್ದು, ಬೈರತಿ ಬಸವರಾಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಭಾರತಿನಗರ ಠಾಣೆಯಲ್ಲಿ ಬೈರತಿ ಬಸವರಾಜ್ ಸೇರಿದಂತೆ ಐವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಮಾಜಿ ಸಚಿವ ಬೈರತಿ ಬಸವರಾಜ್ ಎ5 ಆರೋಪಿಯಾಗಿದ್ದಾರೆ. ಜಗದೀಶ್ ಎ1, ಕಿರಣ್ ಎ2, ವಿಮಲ್ ಎ 3, ಅನಿಲ್ ಎ4 ರೋಪಿಗಳಾಗಿದ್ದಾರೆ.
ಕಿತ್ತನೂರು ಜಾಗದ ವಿಚಾರವಾಗಿ ರೌಡಿಶೀಟರ್ ಶಿವಪ್ರಕಾಶ್ ಕೊಲೆ ಮಾಡಲಾಗಿದೆ. ಬಿಳಿಬಣ್ಣದ ಸ್ಕಾರ್ಪಿಯೋದಲ್ಲಿ 8-9 ಜನರು ಬಂದು ಶಿವಪ್ರಕಾಶ್ ಗೆ ಬೆದರಿಕೆ ಹಾಕಿದ್ದರು. ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ತಾಯಿ ವಿಜಯಲಕ್ಷ್ಮೀ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.