ನವದೆಹಲಿ: ವಿದ್ಯಾರ್ಥಿಗಳಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿ.ಬಿ.ಎಸ್.ಇ) ಕ್ರಮ ಕೈಗೊಂಡಿದೆ.
ಅಧಿಕ ಕೊಬ್ಬಿನಾಂಶ ಸೇವನೆಯ ಕುರಿತು ಎಚ್ಚರಿಕೆ ಫಲಕಗಳನ್ನು ಸಿಬಿಎಸ್‌ಸಿ ಶಾಲೆಗಳಲ್ಲಿ ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಕರಿದ ತಿನಿಸುಗಳು ಸೇರಿದಂತೆ ಎಣ್ಣೆ ಪದಾರ್ಥಗಳ ಅಧಿಕ ಸೇವನೆಯಿಂದಾಗಿ ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗುತ್ತದೆ. ಜೊತೆಗೆ ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಹೃದ್ರೋಗ, ಬೊಜ್ಜಿನಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅಧಿಕ ಖಾದ್ಯ ತೈಲ ಸೇವನೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಎಚ್ಚರಿಕೆ ಫಲಕಗಳನ್ನು ಅಳವಡಿಸುವಂತೆ ಸೂಚಿಸಲಾಗಿದೆ.
ಇತ್ತೀಚಿಗೆ ಸಿಬಿಎಸ್ಇ ಅಧೀನದ ಶಾಲೆಗಳಲ್ಲಿ ಸಕ್ಕರೆ ಸೇವನೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಎಚ್ಚರಿಕೆ ಫಲಕ ಅಳವಡಿಸಲು ತಿಳಿಸಲಾಗಿತ್ತು. ಮಕ್ಕಳಲ್ಲಿ ಮಧುಮೇಹ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶುಗರ್ ಬೋರ್ಡ್ ಅಳವಡಿಕೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿತ್ತು.
ಇದಾದ ನಂತರ ಅನಾರೋಗ್ಯಕರ ಕೊಬ್ಬು ಮತ್ತು ಎಣ್ಣೆ ಪದಾರ್ಥಗಳ ಬಗ್ಗೆ ಅರಿವು ಮೂಡಿಸಲು ಆಯಿಲ್ ಬೋರ್ಡ್ ಗಳನ್ನು ಅಳವಡಿಸುವಂತೆ ತಿಳಿಸಲಾಗಿದೆ. ಶಾಲೆ ಆವರಣದಲ್ಲಿ, ಮಕ್ಕಳು ಹೆಚ್ಚಾಗಿ ಓಡಾಡುವ ಸ್ಥಳಗಳು, ಸಭಾಂಗಣಗಳು, ಊಟ ಮಾಡುವ ಸ್ಥಳಗಳಲ್ಲಿ ಪೋಸ್ಟರ್ ಗಳು ಅಥವಾ ಡಿಜಿಟಲ್ ಡಿಸ್ ಪ್ಲೇ ಅಳವಡಿಸಿ ಖಾದ್ಯ ತೈಲದ ಅಪಾಯಗಳ ಬಗ್ಗೆ ಮಾಹಿತಿ, ಚಿತ್ರಗಳನ್ನು ಪ್ರದರ್ಶಿಸುವಂತೆ ತಿಳಿಸಲಾಗಿದೆ.