ಡೆಹ್ರಡೂನ್: ಭಾರತ-ನೇಪಾಳ ಗಡಿಯಲ್ಲಿ ಬರೋಬ್ಬರಿ 10 ಕೋಟಿ ಮೌಲ್ಯದ ಡ್ರಘ್ಸ್ ಜಪ್ತಿ ಮಾಡಲಾಗಿದ್ದು, 22 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ.
ಉತ್ತರಾಖಂಡದ ಚಂಪಾವತ್ ಜಿಲ್ಲೆಯ ಬನ್ಬಾಸಾ ಪ್ರದೇಶದಲ್ಲಿ 10.23 ಕೋಟಿ ಮೌಲ್ಯದ ಡ್ರಗ್ಸ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಇಶಾ ಬಂಧಿತ ಮಹಿಳೆ. ಈ ಬಗ್ಗೆ ಚಂಪಾವತ್ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಗಣಪತಿ ಮಾಹಿತಿ ನೀಡಿದ್ದಾರೆ.
ಗಡಿಯಲ್ಲಿ ಇಶಾ ಕಪ್ಪು ಬಣ್ಣದ ಬ್ಯಾಗ್ ಹಾಕಿಕೊಂಡು ಓಡಾಡುತ್ತಿದ್ದರು. ಈಕೆಯನ್ನು ಗಮನಿಸಿದ ಗಸ್ತು ತಂಡ, ತಡೆದು ವಿಚರಣೆ ನಡೆಸಿದೆ ಆಕೆಯ ಬ್ಯಾಗ್ ನಲ್ಲಿ 2 ಪ್ಯಾಕೆಟ್ ಮಾದಕ ವಸ್ತುಗಳು ಪತ್ತೆಯಾಗಿವೆ. ಎನ್ ಡಿಪಿಸಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ವಿಚಾರಣೆ ವೇಳೆ ಮಹಿಳೆ, ತನ್ನ ಪತಿ ರಾಹುಲ್ ಹಾಗೂ ಆತನ ಸ್ನೇಹಿತ ಕುನಾಲ್ ಕೊಹ್ಲಿ, ಜೂನ್ ನಲ್ಲಿ ಉತ್ತರಾಖಂಡದ ಪಿಥೋರಗಢದಿಂದ ಮಾದಕ ವಸ್ತುಗಳನ್ನು ತಂದಿದ್ದರು. ಪೊಲೀಸರ ಕಾರ್ಯಾಚರಣೆ ಬಗ್ಗೆ ಹೆದರಿ ಈ ವಸ್ತುಗಳನ್ನು ಕಾಲುವೆಗೆ ಬಿಸಾಕಲು ಹೋಗುತ್ತಿದ್ದೆ ಎಂದು ಮಹಿಳೆ ತಿಳಿಸಿದ್ದಾಳೆ ಎನ್ನಲಾಗಿದೆ.