ಬೆಂಗಳೂರು: ಮಾಜಿ ಸಚಿವರಾದ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಒಳ ಜಗಳದ ರಾಜಿ ಪಂಚಾಯಿತಿ ದೆಹಲಿಗೆ ಶಿಫ್ಟ್ ಆಗಿದೆ.
ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಮುನಿಸು ಶಮನಕ್ಕೆ ಹೈಕಮಾಂಡ್ ಎಂಟ್ರಿ ಆಗಿದೆ. ದೆಹಲಿಗೆ ಬರುವಂತೆ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಅವರಿಗೆ ಬುಲಾವ್ ನೀಡಲಾಗಿದೆ. ನಿನ್ನೆ ಬಳ್ಳಾರಿಯಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಶ್ರೀರಾಮುಲು ಅವರನ್ನು ಭೇಟಿಯಾಗಿ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ. ನಿನ್ನೆ ಬಳ್ಳಾರಿಯಲ್ಲಿ ಇಲ್ಲದ ಕಾರಣ ಜನಾರ್ದನ ರೆಡ್ಡಿ ಅವರಿಗೆ ಫೋನ್ ಮಾಡಿದ್ದ ವಿ. ಸೋಮಣ್ಣ ನೀವು ಮತ್ತು ಶ್ರೀರಾಮುಲು ಇಬ್ಬರೂ ದೆಹಲಿಗೆ ಬನ್ನಿ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡೋಣ ಎಂದು ಕರೆಯನ್ನು ಕಡಿತಗೊಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಶ್ರೀರಾಮುಲು, ಜನಾರ್ದನ ರೆಡ್ಡಿ ಮುನಿಸಿಕೊಂಡಿದ್ದಾರೆ ಬಹಿರಂಗವಾಗಿ ಇಬ್ಬರು ನಾಯಕರಿಂದ ಪರಸ್ಪರ ಆರೋಪ- ಪ್ರತ್ಯಾರೋಪ ಕೇಳಿ ಬರುತ್ತಿದ್ದು, ಇಬ್ಬರನ್ನು ಒಂದುಗೂಡಿಸಲು ರಾಜ್ಯ ಬಿಜೆಪಿ ನಾಯಕರು ಪ್ರಯತ್ನ ನಡೆಸಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಪ್ರಯತ್ನ ನಡೆಸಿದ್ದರು. ಆದರೆ, ರಾಜ್ಯ ನಾಯಕರ ಹೇಳಿಕೆಗಳಿಗೆ ಜಗ್ಗದೆ ಇಬ್ಬರ ನಡುವೆ ಮುನಿಸು ಮುಂದುವರೆದಿತ್ತು. ರಾಮುಲು -ರೆಡ್ಡಿ ಒಳ ಜಗಳದಿಂದ ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಇದನ್ನು ಅರಿತು ಡ್ಯಾಮೇಜ್ ಕಂಟ್ರೋಲ್ ಗೆ ಬಿಜೆಪಿ ಹೈಕಮಾಂಡ್ ಮುಂದಾಗಿದ್ದು, ಶ್ರೀರಾಮುಲು – ರೆಡ್ಡಿ ಜೊತೆಗೆ ಚರ್ಚೆ ನಡೆಸಲಿದೆ. ದೆಹಲಿಯಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ಮತ್ತು ಜೆ.ಪಿ. ನಡ್ಡಾ ಸಮ್ಮುಖದಲ್ಲಿ ಚರ್ಚೆ ನಡೆಸಲಾಗುವುದು. ಹೈಕಮಾಂಡ್ ಮೂಲಕ ಒತ್ತಡ ಹಾಕಿಸಿ ಇಬ್ಬರನ್ನು ಒಂದು ಮಾಡುವ ತಂತ್ರ ರೂಪಿಸಲಾಗಿದೆ ಎನ್ನಲಾಗಿದೆ.