ರಾಯಚೂರು: ಆಹಾರ ತಯಾರಿಕಾ ಘಟಕದಲ್ಲಿಯೇ ಕಲಬೆರಿಕೆ ವಸ್ತುಗಳನ್ನು ಸಿದ್ಧಪಡಿಸಿ ಬಣ್ಣ ಹಾಕಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದಾಗ ಅಧಿಕಾರಿಗಳೇ ಶಾಕ್ ಆದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಇಸ್ಲಾಂ ನಗರದಲ್ಲಿ ನಡೆದಿದೆ.
ಪ್ರತಿಷ್ಠಿತ ವ್ಯಾಪಾರಿಯೊಬ್ಬರ ಗೋದಾಮಿನ ಮೇಲೆ ದಾಳಿ ನಡೆಸಿದಾಗ ಕಳಪೆ ಗುಣಮಟ್ಟದ ಆಹಾರ ಪದಾರ್ತಹಗಳಿಗೆ ರಾಸಾಯನಿಕ ಬಣ್ಣ ಬೆರೆಸಿ ಮಾರಾಟ ಮಾಡುತ್ತಿರುವ ದಂಧೆ ಬೆಳಕಿಗೆ ಬಂದಿದೆ. ಖಾಲಿ ಜಾಗದಲ್ಲಿ ಬಣ್ಣ ಹಾಕಿದ್ದ ರಾಶಿ ರಾಶಿ ಬೇಳೆ ಕಾಳುಗಳು, ಮಸಾಲೆ ಪದಾರ್ಥಗಳನ್ನು ಒಣಹಾಕಲಾಗಿದ್ದು ಕಂಡು ಅಧಿಕಾರಿಗಳು ದಂಗಾಗಿದ್ದಾರೆ.
ದಾಳಿ ವೇಳೆ 367 ಕೆಜಿ ಬಣ್ಣ ಬೆರೆಸಿದ ಧನಿಯಾ,, 152 ಕೆಜಿ ಕೆಂಪು ಮಿಶ್ರಿತ ಕಡಲೆ, 220 ಕೆಜಿ ಹಳದಿ ಬಣ್ಣ ಮಿಶ್ರಿತ ಬೇಳೆ, ಪಪ್ಪಾಯ ಬೀಜ, ಚಕ್ಕೆ, ಕೊಬ್ಬರಿ ಪುಯ್ಡಿ ಸೇರಿ ಒಟ್ಟು 842 ಕೆಜಿ ಕಲಬೆರಕೆ ಆಹಾರಗಳನ್ನು ಜಪ್ತಿ ಮಾಡಲಾಗಿದೆ. ಇವುಗಳಲ್ಲಿ ಜೀವಕ್ಕೆ ಹಾನಿಯುಂಟುಮಾಡುವ ಮಾರಕ ರಾಸಾಯನಿಕ ಬೆರೆಸಿರುವುದು ತಿಳಿದುಬಂದಿದೆ. ಆಹಾರ ಸುರಕ್ಷತಾ ಅಧಿಕಾರಿ ಗುರುರಾಜ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ತನಿಖೆ ಮುಂದುವರೆದಿದೆ.