ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಸಮೀಪದ ಹಿರೇಸಾನಿ ಅಂಗನವಾಡಿಯಲ್ಲಿರುವ 13 ಮಕ್ಕಳಿಗೆ ಮಂಗಳವಾರ ಸಂಜೆಯಿಂದ ವಾಂತಿಭೇದಿ ಶುರುವಾಗಿದ್ದು, ಕೆಲವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕೆಲವು ಮಕ್ಕಳನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳವಾರ ಅಂಗನವಾಡಿಯಲ್ಲಿ ಮಕ್ಕಳಿಗೆ ವಿಟಮಿನ್ ಎ ಡ್ರಾಪ್ಸ್ ಹಾಕಲಾಗಿತ್ತು. ಅಂದು ಸಂಜೆ ಮನೆಗೆ ಬಂದ ಮಕ್ಕಳಿಗೆ ಜ್ವರ ಕಾಣಿಸಿಕೊಂಡಿದ್ದು, ವಾಂತಿ ಭೇದಿ ಶುರುವಾಗಿದೆ. ಕೂಡಲೇ ಪೋಷಕರು ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೂ ವಾಸಿಯಾಗಿಲ್ಲ.
ಅಂಗನವಾಡಿಯಲ್ಲಿ ನೀಡಿದ ಡ್ರಾಪ್ಸ್ ನಿಂದಲೇ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಮಾಹಿತಿ ತಿಳಿದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಜಯಶೀಲಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಭಾರತೀ ಬಣಕಾರ, ಇಲಾಖೆಯ ಅಧಿಕಾರಿ ಗಾಯತ್ರಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಪೋಷಕರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಎಲ್ಲಾ ಮಕ್ಕಳನ್ನು ಶಿವಮೊಗ್ಗ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಹಿರೇಸಾನಿ ಮತ್ತು ಮಸ್ಕಾನಿಯ ಅಂಗನವಾಡಿ ಮಕ್ಕಳಿಗೆ ವಿಟಮಿನ್ ಎ ಡ್ರಾಪ್ಸ್ ನೀಡಲಾಗಿದೆ. ಹಿರೇಸಾನಿ ಮಕ್ಕಳಲ್ಲಿ ಮಾತ್ರ ಅನಾರೋಗ್ಯ ಕಂಡು ಬಂದ ಹಿನ್ನೆಲೆಯಲ್ಲಿ ಮಕ್ಕಳಿಗೆ ನೀಡುತ್ತಿದ್ದ ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ.