ಬೆಂಗಳೂರು: ಕಿಟ್ಟಿ ಪಾರ್ಟಿ ಹೆಸರಿನಲ್ಲಿ ಶ್ರೀಮಂತ ಮಹಿಳೆಯರನ್ನು ಪರಿಚಯಿಸಿಕೊಂಡು ರಾಜಕೀಯ ನಾಯಕರ ಹೆಸರು ಹೇಳಿ ಕೋಟಿ ಕೋಟಿ ರೂಪಾಯಿ ವಂಚಿಸುತ್ತಿದ್ದ ಮಹಿಳೆಯನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸವಿತಾ ಬಂಧಿತ ಆರೋಪಿ. ಕಿಟ್ಟಿ ಪಾರ್ಟಿ ಆಯೋಜನೆ ಮಾಡುತ್ತಿದ್ದ ಸವಿತಾ ತನಗೆ ದೊಡ್ಡ ದೊಡ್ಡ ರಾಜಕಾರಣಿಗಳು ಗೊತ್ತು. ಸಿಎಂ, ಡಿಸಿಎಂ, ಸಚಿವ ಎಂ.ಬಿ.ಪಾಟೀಲ್ ಅವರ ಹೆಸರು ಹೇಳಿ ಮಹಿಳೆಯಿಂದ ಹೂಡಿಕೆ ಹೆಸರಲ್ಲಿ ಹಣ ಪಡೆದು ವಂಚಿಸುತ್ತಿದ್ದಳು. ಅಲ್ಲದೇ ಅಮೆರಿಕಾದಿಂದ ಕಡಿಮೆ ಬೆಲೆಗೆ ಚಿನ್ನ ತರಿಸಿಕೊಡುವುದಾಗಿ ಒಬ್ಬೊಬ್ಬ ಮಹಿಳೆಯರಿಂದ 50 ಲಕ್ಷದಿಂದ ಎರಡೂವರೆ ಕೋಟಿವರೆಗೂ ಹಣ ಪಡೆದಿದ್ದಳು.
ಇದೇ ರೀತಿ 20ಕ್ಕೂ ಹೆಚ್ಚು ಮಹಿಳೆಯಿಂದ 30 ಕೋಟಿಗೂ ಅಧಿಕ ಹಣ ಪಡೆದು ವಂಚಿಸಿದ್ದಾಳೆ. ಈ ಹಿಂದೆ ಗೋವಿಂದರಾಜನಗರ ಠಾಣೆಯಲ್ಲಿ ಕೇಸ್ ದಾಖಲಾಗಿ ಬಂಧನಕ್ಕೊಳಗಾಗಿದ್ದ ಸವಿತಾ ಬೇಲ್ ಮೇಲೆ ಹೊರಬಂದಿದ್ದಳು. ಬಳಿಕ ಮತ್ತದೇ ಹಳೇ ಚಾಳಿ ಮುಂದುವರೆಸಿದ್ದಳು. ಇದೀಗ ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.