ಬೆಂಗಳೂರು: ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮ -20108ಕ್ಕೆ ತಿದ್ದುಪಡಿ ಮಾಡಿ ಹೊಸ ನಿಯಮಗಳೊಂದಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಿದೆ.
ಕೇಂದ್ರೀಯ ವಿದ್ಯಾಲಯಗಳ ಐದು ಮತ್ತು ಎಂಟನೇ ತರಗತಿಯ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಪ್ರವೇಶ ಪಡೆದುಕೊಳ್ಳಲು ಕಡ್ಡಾಯವಾಗಿ ತೇರ್ಗಡೆ ಹೊಂದಬೇಕಿದೆ.
ಕೇಂದ್ರ ಜಾರಿಗೊಳಿಸಿದ ಹೊಸ ನಿಯಮದ ಪ್ರಕಾರ ಐದು ಮತ್ತು ಎಂಟನೇ ತರಗತಿ ಉತ್ತೀರ್ಣರಾಗುವುದನ್ನು ಕೇಂದ್ರ ಶಿಕ್ಷಣ ಸಚಿವಾಲಯ 2024ರ ಡಿಸೆಂಬರ್ 16ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಕಡ್ಡಾಯಗೊಳಿಸಲಾಗಿದೆ. 2025- 26 ರಿಂದ ಇದು ಅಧಿಕೃತವಾಗಿ ಜಾರಿಗೆ ಬಂದಿದೆ. ಪ್ರಸಕ್ತ ಶೈಕ್ಷಣಿಕ ವರ್ಷದ ಮಾರ್ಚ್ ನಲ್ಲಿ ವಾರ್ಷಿಕ ಪರೀಕ್ಷೆ ಬರೆಯಲಿರುವ ಐದು ಮತ್ತು ಎಂಟನೇ ತರಗತಿಯ ಮಕ್ಕಳಿಗೆ ಈ ನಿಯಮ ಅನ್ವಯವಾಗುತ್ತದೆ.
ರಾಜ್ಯದ 53 ಕೇಂದ್ರೀಯ ವಿದ್ಯಾಲಯ ಶಾಲೆಗಳಲ್ಲಿ 11,000 ಮಕ್ಕಳು 5 ಮತ್ತು 8ನೇ ತರಗತಿಯಲ್ಲಿ ಓದುತ್ತಿದ್ದಾರೆ. ಪ್ರಾಥಮಿಕ ಹಂತದ 5, ಮಾಧ್ಯಮಿಕ ಹಂತದ 8ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಲು ಈ ನಿಯಮ ಜಾರಿಗೊಳಿಸಲಾಗಿದೆ.
ಮುಖ್ಯ ಪರೀಕ್ಷೆ ಫಲಿತಾಂಶ ಘೋಷಣೆಯಾದ ದಿನಾಂಕದಿಂದ ಎರಡು ತಿಂಗಳ ಅವಧಿಯೊಳಗೆ ಮರು ಪರೀಕ್ಷೆಗೆ ಅವಕಾಶ ನೀಡಲಿದ್ದು, ಮರು ಪರೀಕ್ಷೆಯಲ್ಲೂ ವಿದ್ಯಾರ್ಥಿಗಳು ಫೇಲಾದಲ್ಲಿ ಹಿಂದಿನ ತರಗತಿಯಲ್ಲಿಯೇ ಓದಬೇಕಿದೆ ಎನ್ನಲಾಗಿದೆ.