ಬೆಂಗಳೂರು: ರಾಜ್ಯದಲ್ಲಿ ಸಾಲು ಸಾಲು ಹೃದಯಾಘಾತದ ಸಾವಿನ ಬೆನ್ನಲ್ಲೇ ಸರ್ಕಾರ ಅನೇಕ ಕ್ರಮ ಕೈಗೊಂಡಿದೆ. ಹೃದಯಾಘಾತಕ್ಕೆ ಬಲಿಯಾದವರ ಮರಣೋತ್ತರ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಹೃದಯಾಘಾತವನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಿಸಲಾಗಿದೆ.
ಹೃದಯಾಘಾತದ ಹಠಾತ್ ಸಾವಿಗೆ ಲಸಿಕೆ ಕಾರಣವಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಶಾಲೆಗಳಲ್ಲಿ ಹೃದಯಾಘಾತ ಪಠ್ಯ ಅಳವಡಿಸಲಾಗುವುದು. ಮಕ್ಕಳಿಗೆ ಶಾಲೆಗಳಲ್ಲಿ ಹೃದಯ ಪರೀಕ್ಷೆ ನಡೆಸಲಾಗುವುದು. ಕೋವಿಡ್ ಬಳಿಕ ಬದಲಾದ ಜೀವನ ಶೈಲಿಯಿಂದ ಹೃದಯಾಘಾತ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.
ಹೃದಯದ ವಿಚಾರ ಪಠ್ಯದಲ್ಲಿ ಅಳವಡಿಕೆ, 15 ವರ್ಷದ ಮಕ್ಕಳಿಗೆ ಶಾಲೆಯಲ್ಲಿ ಹೃದಯ ಸೇರಿ ಆರೋಗ್ಯ ತಪಾಸಣೆ, ಎಲ್ಲ ತಾಲೂಕು ಆಸ್ಪತ್ರೆಗಳಿಗೂ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ವಿಸ್ತರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಹೃದಯಘಾತವನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಿಸಲು ತೀರ್ಮಾನಿಸಲಾಗಿದೆ. ಆಸ್ಪತ್ರೆಯ ಹೊರಗೆ ಯಾರಾದರೂ ಹೃದಯಾಘಾತದಿಂದ ಮೃತಪಟ್ಟಲ್ಲಿ ಮರಣೋತ್ತರ ಪರೀಕ್ಷೆ ಕಡ್ಡಾಯ ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕೋವಿಡ್ ಲಸಿಕೆ ಇಲ್ಲದಿದ್ದರೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನ ಸಾವಿಗೀಡಾಗುತ್ತಿದ್ದರು. ಕೋವಿಡ್ ಬಂದ ನಂತರ ಹೃದಯಾಘಾತ ಪ್ರಕರಣ ಶೇಕಡ 5ರಷ್ಟು ಹೆಚ್ಚಾಗಿದೆ. ಒತ್ತಡ, ಮಧುಮೇಹ, ಬೊಜ್ಜು, ಬದಲಾದ ಜೀವನ ಶೈಲಿ ಇದಕ್ಕೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.