ಕಲಬುರಗಿ: ಗ್ರಾಮೀಣ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಜುಲೈ 9ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮುಷ್ಕರ ನಡೆಸಲಾಗುವುದು ಎಂದು ಅಖಿಲ ಭಾರತ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘದ ಉಪಾಧ್ಯಕ್ಷ ಶಿವಕುಮಾರ ಬಗಲೂರ ತಿಳಿಸಿದ್ದಾರೆ.
ಕಲಬುರಗಿ ಪತ್ರಿಕಾ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಗ್ರಾಮೀಣ ಬ್ಯಾಂಕುಗಳ ಖಾಸಗೀಕರಣ ನಿರ್ಧಾರ ಕೈಬಿಡಬೇಕು ಎಂದು ಒತ್ತಾಯಿಸಿ ಜುಲೈ 9ರಂದು ಮುಷ್ಕರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಅಖಿಲ ಭಾರತ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘ, ಕೇಂದ್ರ ಕಾರ್ಮಿಕ ಸಂಘಟನೆಗಳ ಆಶ್ರಯದಲ್ಲಿ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಮುಷ್ಕರ ಕೈಗೊಳ್ಳಲಾಗಿದೆ. ಐಪಿಒ ಹಿಂಪಡೆದು ಗ್ರಾಮೀಣ ಬ್ಯಾಂಕ್ ಖಾಸಗಿಕರಣ ಮಾಡುವುದನ್ನು ಕೈಬಿಡಬೇಕು. ದೇಶದ 28 ರಾಜ್ಯಗಳಲ್ಲಿರುವ ಗ್ರಾಮೀಣ ಬ್ಯಾಂಕುಗಳನ್ನು ಒಗ್ಗೂಡಿಸಿ ರಾಷ್ಟ್ರೀಯ ಗ್ರಾಮೀಣ ಬ್ಯಾಂಕ್ ಸ್ಥಾಪನೆ ಮಾಡಬೇಕು. ದೇಶಾದ್ಯಂತ ಗ್ರಾಮೀಣ ಬ್ಯಾಂಕ್ ಗಳಲ್ಲಿ ಖಾಲಿ ಇರುವ ಸುಮಾರು 30 ಸಾವಿರ ಹುದ್ದೆಗಳ ನೇಮಕ ಮಾಡಿಕೊಳ್ಳಬೇಕು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇರುವಂತೆ ಗ್ರಾಮೀಣ ಬ್ಯಾಂಕುಗಳಲ್ಲಿಯೂ ಪದೋನ್ನತಿ ಜಾರಿಗೊಳಿಸಬೇಕು. ದಿನಗೂಲಿ ನೌಕರರನ್ನು ಕಾಯಂಗೊಳಿಸಬೇಕು. ಹೊಸ ಪಿಂಚಣಿ ಯೋಜನೆ ರದ್ದು ಮಾಡಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕೆಂದು ಒತ್ತಾಯಿಸಲಾಗಿದೆ.