ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಡ್ದಿ ಗ್ಯಾಂಗ್ ಪ್ರತ್ಯಕ್ಷವಾಗಿದೆ. ಜಿಲ್ಲೆಯ ಗೌರಿಬಿದನೂರಿನಲ್ಲಿ ದರೋಡೆಗೆ ಸಂಚು ಹಾಕುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.
ಗೌರಿಬಿದನೂರಿನಲ್ಲಿ ನಿನ್ನೆ ತಡರಾತ್ರಿ ಚಡ್ಡಿಗ್ಯಾಂಗ್ ಎಂಟ್ರಿಕೊಟ್ಟಿದ್ದು, ಹಲವೆಡೆ ದರೋಡೆಗೆ ಸಂಚು ಹಾಕುತ್ತಿದ್ದ ಬಗ್ಗೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗೌರಿಬಿದನೂರು ನಗರದ ರೈಲ್ವೆ ನಿಲ್ದಾಣದ ಬಳಿ ಜುಲೈ 5ರಂದು ಮುಂಜಾನೆ 2:25ರ ಸುಮಾರಿಗೆ ಅಪರಿಚಿತ ಗ್ಯಾಂಗ್ವೊಂದು ಓಡಾಡಿದೆ. ನಾಲ್ವರ ಗ್ಯಾಂಗ್ ಚಡ್ಡಿ ಧರಿಸಿದ್ದು, ಮುಖಕ್ಕೆ ಬಟ್ಟೆ ಸುತ್ತಿಕೊಂಡು, ಸೊಂಟದಲ್ಲಿ ಮಾರಕಾಸ್ತ್ರಗಳನ್ನು ಕಟ್ಟಿಕೊಂಡು ದರೋಡೆಗೆ ಯತ್ನಿಸುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಗೌರಿಬಿದನೂರು ನಗರ ಪೊಲೀಸ್ ಸಿಬ್ಬಂದಿ ತಡರಾತ್ರಿ ಗಸ್ತಿನಲ್ಲಿದ್ದಾಗ ಅಪರಿಚಿತ ವ್ಯಕ್ತಿಗಳು ಓಡಾಡುತ್ತಿರುವ ಬಗ್ಗೆ ಸುಳಿವು ಸಿಕ್ಕಿದೆ. ಸ್ಥಳಕ್ಕೆ ಪೊಲೀಸರು ತೆರಳುವಷ್ಟರಲ್ಲಿ ಚಡ್ಡಿ ಗ್ಯಾಂಗ್ ಅಲ್ಲಿಂದ ನಾಪತ್ತೆಯಾಗಿದೆ. ಸ್ಥಳದಲ್ಲಿದ್ದ ಸಿಸಿ ಟಿವಿ ಪರಿಶೀಲಿಸಿದಾಗ ದರೋಡೆಗೆ ಸಂಚು ರೂಪಿಸಿದ್ದು ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಅಪರಿಚಿತ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರುವಂತೆ ಪೊಲೀಸರು ಮನವಿ ಮಾಡಿದ್ದಾರೆ.