ಬೆಂಗಳೂರು: ರಾಜ್ಯದಲ್ಲಿ ನಡೆದ ಗಣಿ ಅಕ್ರಮಗಳ ಬಗ್ಗೆ, ನ್ಯಾಯಾಲಯಗಳಲ್ಲಿರುವ ಪ್ರಕರಣಗಳ ವಿಚಾರಣೆ, ಅಕ್ರಮ ಗಣಿಗಾರಿಕೆಯಿಂದ ನಷ್ಟವಾಗಿರುವ ಹಣ ವಸೂಲಾತಿ ಬಗ್ಗೆ ಅಧ್ಯಯನ ನಡೆಸಿ ತಿಂಗಳೊಳಗೆ ವರದಿ ಸಲ್ಲಿಸುವಂತೆ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ನಷ್ಟ ವಸೂಲಾತಿಗೆ ಆಯುಕ್ತರ ನೇಮಕಾತಿ ಮಾಡುವ ಕುರಿತು ಮತ್ತು ಶೀಘ್ರಗತಿ ನ್ಯಾಯಾಲಯ ಬಗ್ಗೆ ತಿಂಗಳೊಳಗೆ ವರದಿ ಸಲ್ಲಿಸಲು ಹೆಚ್.ಕೆ. ಪಾಟೀಲ್ ಅಧ್ಯಕ್ಷತೆಯ ಸಮಿತಿ ರಚಿಸಲಾಗಿದೆ.
ಸಮಿತಿಯ ಸದಸ್ಯರಾಗಿ ಸಚಿವರಾದ ಡಾ.ಜಿ. ಪರಮೇಶ್ವರ್, ಕೆ.ಹೆಚ್. ಮುನಿಯಪ್ಪ, ಈಶ್ವರ್ ಖಂಡ್ರೆ, ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ನೇಮಕ ಮಾಡಲಾಗಿದೆ. ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ತಾರ್ಕಿಕ ಅಂತಕ್ಕೆ ಕೊಂಡೊಯ್ಯುವಲ್ಲಿ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಹೆಚ್.ಕೆ. ಪಾಟೀಲ್ ಸಿಎಂಗೆ ಪತ್ರ ಬರೆದಿದ್ದರು.