ಬೆಂಗಳೂರು: ರಾಜ್ಯದ ಪೊಲೀಸರ ಕಾರ್ಯದೊತ್ತದ ತಗ್ಗಿಸಲು ಸರ್ಕಾರ ಪ್ಲಾನ್ ಮಾಡಿದ್ದು, ಪೊಲೀಸರಿಗೆ ಮೂರು ಶಿಫ್ಟ್ ನಲ್ಲಿ ಡ್ಯೂಟಿ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಿದೆ.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆಯಿಂದ ಕರ್ತವ್ಯದಲ್ಲಿ ಇರುವವರ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಎರಡು ಪಾಳಿಯ ವ್ಯವಸ್ಥೆ ಬದಲು ಮೂರು ಪಾಳಿ ವ್ಯವಸ್ಥೆ ಜಾರಿಗೆ ಸರ್ಕಾರ ನಿರ್ಧರಿಸಿದ್ದು, ಹೊಸ ಪದ್ದತಿಯ ಕುರಿತಾಗಿ ಅಭಿಪ್ರಾಯ ನೀಡುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದೆ.
ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮಾಹಿತಿ ಅನ್ವಯ ರಾಜ್ಯದಲ್ಲಿ 70,407 ಸಿವಿಲ್ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಪೊಲೀಸ್ ಕಾನ್ಸ್ಟೇಬಲ್ ನಿಂದ ಸಹಾಯಕ ಸಬ್ ಇನ್ಸ್ಪೆಕ್ಟರ್ ಹುದ್ದೆ ಹೆಚ್ಚಿನ ಸಂಖ್ಯೆಯಲ್ಲಿ ಖಾಲಿ ಇದ್ದು, ಒಂದು ಲಕ್ಷ ಜನರ ಕಾವಲಿಗೆ ಕೇವಲ 104 ಜನ ಪೊಲೀಸರಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಪೊಲೀಸರ ಸಂಖ್ಯೆ ತೀರಾ ಕಡಿಮೆ ಇದ್ದು, ವಾರದ ರಜೆ ಇಲ್ಲದಂತೆ 12 ಗಂಟೆ ಕೆಲಸ ಮಾಡುವ ಪರಿಸ್ಥಿತಿ ಇದೆ.
ಹೀಗಾಗಿ ಸದ್ಯ ಬೆಳಗ್ಗೆ ಮತ್ತು ರಾತ್ರಿ 2 ಪಾಳಿಯಲ್ಲಿ 12 ಗಂಟೆ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸುತ್ತಿದ್ದು, ಬೆಳಗ್ಗೆಯಿಂದ ರಾತ್ರಿಯವರೆಗೂ, ರಾತ್ರಿಯಿಂದ ಬೆಳಗ್ಗೆಯವರೆಗೂ ಕೆಲಸ ಮಾಡಬೇಕಿದೆ. ಯಾವುದಾದರೂ ಪ್ರಕರಣ ಬಂದರೆ, ಹೊಯ್ಸಳ ಕರ್ತವ್ಯ, ಬಂದೋಬಸ್ತ್ ಡ್ಯೂಟಿಯಾದರೆ ಒಂದೆರಡು ಗಂಟೆ ಡ್ಯೂಟಿ ಸಮಯ ಜಾಸ್ತಿಯಾಗುತ್ತದೆ.
ಹೀಗಾಗಿ ಕುಟುಂಬ, ಮಕ್ಕಳು, ತಂದೆ -ತಾಯಿ ಜೊತೆಗಿರಲು ಸಿಬ್ಬಂದಿಗೆ ಸಮಯವೇ ಸಿಗುತ್ತಿಲ್ಲ. ಹಬ್ಬ ಹರಿದಿನಗಳಲ್ಲಿಯೂ ಬೆಳಗ್ಗೆಯಿಂದ ರಾತ್ರಿವರೆಗೆ, ರಾತ್ರಿಯಿಂದ ಬೆಳಗ್ಗೆವರೆಗೆ ಕೆಲಸ ಮಾಡಬೇಕಿದೆ. ಕೆಲಸದ ಒತ್ತಡದಿಂದ ಸಿಬ್ಬಂದಿ ಹೃದಯಾಘಾತ ಸೇರಿ ಇನ್ನಿತರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಪೊಲೀಸ್ ಸಿಬ್ಬಂದಿಗೆ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಕಡ್ಡಾಯಗೊಳಿಸಬೇಕು. ಅವರ ಅವಲಂಬಿತರಿಗೆ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಕಡ್ಡಾಯಗೊಳಿಸಬೇಕು. ಎರಡು ಶಿಫ್ಟ್ ಡ್ಯೂಟಿ ವ್ಯವಸ್ಥೆ ಬದಲಿಸಿ ಮೂರು ಶಿಫ್ಟ್ ಕರ್ತವ್ಯ ನಿರ್ವಹಣೆಗೆ ಅವಕಾಶ ನೀಡಬೇಕೆಂಬುದರ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ.