ಬೆಂಗಳೂರು: ರಾಜ್ಯದ ಬಹುತೇಕ ಭಾಗದಲ್ಲಿ ಮುಂಗಾರು ಮಳೆ ಆರ್ಭಟಿಸುತ್ತಿದ್ದು, ಭಾರಿ ಮಳೆ ಕಾರಣ ಹಲವೆಡೆ ಶಾಲೆಗಳಿಗೆ ರಜೆ ನೀಡಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ 4 ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಶಿವಮೊಗ್ಗ, ಭದ್ರಾವತಿ, ಸಾಗರ, ಹೊಸನಗರ ತಾಲ್ಲೂಕಿನಾದ್ಯಂತ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ & ಪ್ರೌಢ ಶಾಲೆಗಳಿಗೆ ದಿನಾಂಕ:04.07.2025ರ ಶುಕ್ರವಾರದಂದು ರಜೆ ಘೋಷಿಸಿದೆ. ಸದರಿ ರಜಾ ಅವಧಿಯ ಶೈಕ್ಷಣಿಕ ಪಠ್ಯಗಳನ್ನು ಮುಂದಿನ ರಜೆಯ ದಿನದಲ್ಲಿ ಸರಿಹೊಂದಿಸಿಕೊಳ್ಳಲು ಸಂಬಂಧಿತ ಶಾಲಾ ಮುಖ್ಯಸ್ಥರುಗಳಿಗೆ ತಿಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದೆ. ಬಂಟ್ವಾಳ ತಾಲೂಕಿನಲ್ಲಿ ಭಾರಿ ಮಳೆ ಕಾರಣ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 4ರಂದು ತಹಶೀಲ್ದಾರರು ಮತ್ತು ಬಂಟ್ವಾಳ ತಾಲೂಕು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ರಜೆ ಘೋಷಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಆರು ತಾಲೂಕಿನಲ್ಲಿ ರಜೆ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು, ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್. ಪುರ ತಾಲೂಕಿನಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಂಗನವಾಡಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ನಾಳೆ ರಜೆ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಜೋಯಿಡಾ, ಸಿದ್ದಾಪುರ ತಾಲೂಕಿನ ಶಾಲೆಗಳಿಗೆ ಕೂಡ ರಜೆ ನೀಡಲಾಗಿದೆ.