ಬೆಂಗಳೂರು: ಗ್ರಾಮೀಣ ಪತ್ರಕರ್ತರಿಗೆ ಸರ್ಕಾರದಿಂದ ಉಚಿತ ಸಾರಿಗೆ ಬಸ್ ಪಾಸ್ ವಿತರಣೆಗೆ ಚಾಲನೆ ನೀಡಲಾಗಿದೆ. ಈ ಬಸ್ ಪಾಸ್ ಗಳನ್ನು ಕೇವಲ ಪೂರ್ಣಕಾಲಿಕ ಮಾತ್ರವಲ್ಲ, ಅರೆಕಾಲಿಕ ಪತ್ರಕರ್ತರು ಮತ್ತು ಸಂಪಾದಕರಿಗೂ ನೀಡಲು ಷರತ್ತುಬದ್ಧ ಪರಿಷ್ಕೃತ ಆದೇಶವನ್ನು ಸರ್ಕಾರ ಹೊರಡಿಸಿದೆ.
ಪೂರ್ಣಕಾಲಿಕ, ಅರೆಕಾಲಿಕ ಪತ್ರಕರ್ತರು, ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವವರು ತಮ್ಮ ಸಂಸ್ಥೆಯ ನೇಮಕಾತಿ ಪತ್ರ, ಸಂಪಾದಕರು ಅಥವಾ ಮುಖ್ಯಸ್ಥರ ಶಿಫಾರಸ್ಸು ಪತ್ರ, ಸಂಸ್ಥೆಯಿಂದ ಪಡೆಯುತ್ತಿರುವ ಲೈನೇಜ್ ಸಂಭಾವನೆ ಬಗ್ಗೆ 11 ತಿಂಗಳ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿ ಉಚಿತ ಬಸ್ ಪಾಸ್ ಪಡೆಯಬಹುದಾಗಿದೆ.
ಆದರೆ, ಫಲಾನುಭವಿಗಳ ಸಂಖ್ಯೆ 5222 ಮೀರದಂತೆ ಷರತ್ತು ವಿಧಿಸಿ ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ತಿದ್ದುಪಡಿ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಮೊದಲ ಆದೇಶದಲ್ಲಿ ಪೂರ್ಣಾವಧಿ ಸೇವೆ ಸಲ್ಲಿಸುತ್ತಿರುವ ಗ್ರಾಮೀಣ ಪತ್ರಕರ್ತರು ಮಾತ್ರ ಉಚಿತ ಬಸ್ ಪಾಸ್ ಗೆ ಅರ್ಜಿ ಸಲ್ಲಿಸಬಹುದೆಂದು ಷರತ್ತು ವಿಧಿಸಲಾಗಿತ್ತು, ಆದರೆ, ಗ್ರಾಮೀಣ ಭಾಗದಲ್ಲಿ ತಾಲೂಕು ಮಟ್ಟದಲ್ಲಿ ಅರೆ ಕಾಲಿಕ, ಫ್ರೀಲ್ಯಾರ್ ಗಳಾಗಿ ಸೇವೆ ಸಲ್ಲಿಸುತ್ತಿರುವವರೇ ಹೆಚ್ಚಾಗಿದ್ದು, ಇದರಿಂದ ಅವರಿಗೆ ಬಸ್ ಪಾಸ್ ಸಿಗದ ಆತಂಕ ಉಂಟಾಗಿತ್ತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಿಯಮ ಬದಲಾವಣೆಗೆ ಮನವಿ ಮಾಡಿದ್ದು, ಇದನ್ನು ಆಧರಿಸಿ ಎಲ್ಲಾ ಪತ್ರಕರ್ತರಿಗೂ ಬಸ್ ಪಾಸ್ ಸಿಗುವಂತೆ ಅವಕಾಶ ಕಲ್ಪಿಸಲಾಗಿದೆ.