ಪುಣೆಯಲ್ಲಿ ನಡೆದ ಅತ್ಯಾಚಾರ ಪ್ರಕರಣವೊಂದು ಎಲ್ಲರನ್ನ ಬೆಚ್ಚಿಬೀಳಿಸಿದೆ. ಮಹಿಳೆ ಮೇಲೆ ‘ಅತ್ಯಾಚಾರ’ ಎಸಗಿದ ಕಿರಾತಕ ಆಕೆಯ ಮೊಬೈಲ್ ನಲ್ಲಿ ಸೆಲ್ಪಿ ತೆಗೆದುಕೊಂಡ ಘಟನೆ ನಡೆದಿದೆ.
ಪುಣೆಯ ಕೊಂಧ್ವಾದಲ್ಲಿ ಐಷಾರಾಮಿ ಸೊಸೈಟಿಯಲ್ಲಿ ಕೊರಿಯರ್ ಡೆಲಿವರಿ ಬಾಯ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ 25 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಆರೋಪಿಯು ಮಹಿಳೆಯ ಮುಖದ ಮೇಲೆ ಏನೋ ಸಿಂಪಡಿಸಿ ನಂತರ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿ ಬುಧವಾರ ಸಂಜೆ 7.30 ರ ಸುಮಾರಿಗೆ ಕೊರಿಯರ್ ಡೆಲಿವರಿ ಬಾಯ್ ಆಗಿ ಸೊಸೈಟಿಗೆ ಪ್ರವೇಶಿಸಿದ್ದಾನೆ. ಮಹಿಳೆ ತನಗೆ ಕೊರಿಯರ್ ಇಲ್ಲ ಎಂದು ಹೇಳಿದಾಗಲೂ, “ಸಹಿ ಅಗತ್ಯವಿದೆ” ಎಂದು ಒತ್ತಾಯಿಸುತ್ತಾನೆ. ಮಹಿಳೆ ಬಾಗಿಲು ತೆರೆದಾಗ, ಆ ವ್ಯಕ್ತಿ ಆಕೆಯ ಮುಖದ ಮೇಲೆ ಏನನ್ನೋ ಸಿಂಪಡಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಅತ್ಯಾಚಾರ ಎಸಗಿದ ಬಳಿಕ ಅವನು ಮಹಿಳೆಯ ಫೋನ್ ಬಳಸಿ ಸೆಲ್ಫಿ ತೆಗೆದುಕೊಂಡು “ನಾನು ಹಿಂತಿರುಗುತ್ತೇನೆ” ಎಂದು ಹೇಳಿಹೋಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ.
ಈ ವಾರದ ಆರಂಭದಲ್ಲಿ ಪುಣೆಯಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ, 17 ವರ್ಷದ ಬಾಲಕಿಯ ಮೇಲೆ ಮೋಟಾರ್ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಸೋಮವಾರ ಬೆಳಗಿನ ಜಾವ 4.15 ರ ಸುಮಾರಿಗೆ ದೌಂಡ್ ಪ್ರದೇಶದಲ್ಲಿ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.