ನವದೆಹಲಿ: ತೀವ್ರ ಬೇಡಿಕೆ ಇರುವ ಅವಧಿ ಪೀಕ್ ಅವರ್ ನಲ್ಲಿ ಓಲಾ, ಉಬರ್, ರ್ಯಾಪಿಡೋ ಕ್ಯಾಬ್, ಆಟೋ, ಬೈಕ್ ಟ್ಯಾಕ್ಸಿ ದರ ಇನ್ನು ಮುಂದೆ ದುಬಾರಿ ಆಗಲಿದೆ.
ಕ್ಯಾಬ್ ಅಗ್ರಿಗೇಟರ್ ಗಳು ಪೀಕ್ ಅವರ್ ನಲ್ಲಿ ಮೂಲ ದರದ ದುಪ್ಪಟ್ಟು ಶುಲ್ಕ ವಿಧಿಸಲು ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅವಕಾಶ ಕಲ್ಪಿಸಿದೆ. ಪರಿಷ್ಕೃತ ಮೋಟಾರ್ ವೆಹಿಕಲ್ಸ್ ಅಗ್ರಿಗೇಟ್ ಗೈಡ್ ಲೈನ್ಸ್- 2025 ರಲ್ಲಿ ಈ ಬದಲಾವಣೆ ಮಾಡಲಾಗಿದ್ದು, ಮೂರು ತಿಂಗಳೊಳಗೆ ಪರಿಷ್ಕೃತ ಮಾರ್ಗಸೂಚಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ.
ಈ ಹಿಂದೆ ಪೀಕ್ ಅವರ್ ನಲ್ಲಿ 1.5ಪಟ್ಟು ದರ ವಿಧಿಸಲು ಅವಕಾಶವಿತ್ತು. ಕ್ಯಾಬ್ ಅಗ್ರಿಗೇಟರ್ ತಮ್ಮ ಚಾಲಕರಿಗೆ ಕನಿಷ್ಠ 5 ಲಕ್ಷ ರೂ.ವರೆಗೆ ಆರೋಗ್ಯ ವಿಮೆ ಮತ್ತು 10 ಲಕ್ಷ ರೂಪಾಯಿವರೆಗೆ ಟರ್ಮ್ ವಿಮೆ ಮಾಡಿಸುವುದನ್ನು ಕಡ್ಡಾಯ ಮಾಡಲಾಗಿದೆ.
ಬುಕ್ ಮಾಡಿದ ಕ್ಯಾಬ್, ಆಟೋ ಸವಾರಿಯನ್ನು ಸಕಾರಣವಿಲ್ಲದೆ ಚಾಲಕ ರದ್ದು ಮಾಡಿದಲ್ಲಿ ಒಟ್ಟು ದರದ ಶೇ. 10 ರಷ್ಟು ದಂಡ ವಿಧಿಸಲು ಅವಕಾಶ ನೀಡಲಾಗಿದೆ. ಗ್ರಾಹಕ ಕೂಡ ಒಪ್ಪಿಕೊಂಡ ರೈಡ್ ರದ್ದು ಮಾಡಿದರೆ ಆತನ ಮೇಲೆಯೂ ಶೇಕಡ 10 ರಷ್ಟು ದಂಡ ವಿಧಿಸಲು ಅವಕಾಶವಿದೆ.
ಟ್ಯಾಕ್ಸಿಗಳಿಗೆ VLTD ಟ್ರ್ಯಾಕಿಂಗ್ ಉಪಕರಣ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಕಂಪನಿಗಳು 24*7 ಸೇವೆಯ ಕಾಲ್ ಸೆಂಟರ್ ಆರಂಭಿಸಬೇಕು. ಸ್ಥಳೀಯ ಭಾಷೆ ಹಾಗೂ ಇಂಗ್ಲೀಷ್ ನಲ್ಲಿ ಗ್ರಾಹಕರಿಗೆ ಸೇವೆ ಒದಗಿಸಬೇಕು ಎಂದು ಹೇಳಲಾಗಿದೆ.