ಬೆಂಗಳೂರು : ಬೆಂಗಳೂರಿನಲ್ಲಿ ಅತ್ಯಂತ ಹೇಯ ಕೃತ್ಯ ನಡೆದಿದ್ದು, ಶೌಚಾಲಯದಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಇನ್ಫೋಸಿಸ್ ಕಂಪನಿಯಲ್ಲಿ ಈ ಘಟನೆ ನಡೆದಿದೆ. ಹೆಚ್ ಆರ್ ಸಿಬ್ಬಂದಿ ಪರಿಶೀಲನೆ ವೇಳೆ ಕೃತ್ಯ ಬೆಳಕಿಗೆ ಬಂದಿದೆ. ಬಂಧಿತನನ್ನು ಅದೇ ಕಂಪನಿಯ ಉದ್ಯೋಗಿ ಆಂಧ್ರಪ್ರದೇಶದ ಮೂಲದ ಸ್ವಪ್ನಿಲ್ ನಾಗೇಶ್ ಎಂದು ಗುರುತಿಸಲಾಗಿದೆ.
ರಹಸ್ಯವಾಗಿ ತನ್ನ ಮೊಬೈಲ್ನಲ್ಲಿ ಮಹಿಳಾ ಉದ್ಯೋಗಿಯ ಶೌಚಾಲಯದ ವಿಡಿಯೋ ರೆಕಾರ್ಡ್ ಮಾಡಿದ್ದ. ಪಕ್ಕದ ಶೌಚಾಲಯದ ಕಮೋಡ್ ಮೇಲೆ ನಿಂತು ರೆಕಾರ್ಡ್ ಮಾಡಿದ್ದಾನೆ. ಈತ ರೆಕಾರ್ಡ್ ಮಾಡುತ್ತಿರುವುದು ಎದುರುಗಡೆ ಡೋರ್ ಮೇಲೆ ಪ್ರತಿಬಿಂಬ ಮೂಡಿದೆ. ಕೂಡಲೇ ಹೊರ ಬಂದು ನೋಡಿದಾಗ ಯಾರೂ ಇರಲಿಲ್ಲ. ಮತ್ತೆ ಶೌಚಾಲಯದ ಒಳ ಹೋಗಿ ಆಕೆ ಪರಿಶೀಲನೆ ಮಾಡಿದ್ದಾರೆ. ಆಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ಕೂಡಲೇ ಮಹಿಳೆ ಕಿರುಚಾಡಿದ್ದು, ಅಲ್ಲಿಯೇ ಮಹಿಳಾ ಉದ್ಯೋಗಿಯ ಕ್ಷಮೆ ಕೇಳಿದ್ದಾನೆ. ಈ ಹಂತದಲ್ಲಿ ಎಚ್ಆರ್ ಸಿಬ್ಬಂದಿ ಬಂದು ಪರಿಶೀಲನೆ ಮಾಡಿದ್ದು, ಸುಮಾರು 30ಕ್ಕೂ ಅಧಿಕ ಮಹಿಳೆಯರ ವಿಡಿಯೋ ಇದರಲ್ಲಿ ಪತ್ತೆಯಾಗಿದೆ.
ಶೌಚಾಲಯಕ್ಕೆ ಹೋಗುವ ಮಹಿಳೆಯರ ವಿಡಿಯೋವನ್ನು ಈತ ರಹಸ್ಯವಾಗಿ ಮೊಬೈಲ್ ನಲ್ಲಿ ಸೆರೆಹಿಡಿಯುತ್ತಿದ್ದನು ಎನ್ನಲಾಗಿದೆ. ಇತ್ತೀಚೆಗೆ ಈ ಘಟನೆ ನಡೆದಿದ್ದು, ಕ್ಷಮೆ ಕೇಳಿಸಿ ಆಡಳಿತ ಮಂಡಳಿ ಸುಮ್ಮನಾಗಿತ್ತು ಎನ್ನಲಾಗಿದೆ. ಆದರೆ ಮಹಿಳಾ ಉದ್ಯೋಗಿಯೊಬ್ಬರ ಪತಿಗೆ ಈ ವಿಚಾರ ತಿಳಿದು ಘಟನೆ ಬೆಳಕಿಗೆ ಬಂದಿದೆ. ಈತನ ಮೊಬೈಲ್ ನಲ್ಲಿ ಹಲವು ಮಹಿಳೆಯರ ಅಶ್ಲೀಲ ವಿಡಿಯೋ ಪತ್ತೆಯಾಗಿದ್ದು, ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮಹಿಳಾ ಉದ್ಯೋಗಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.