ಬೆಂಗಳೂರು: ಮಲೆಮಹದೇಶ್ವರ ಬೆಟ್ಟ ವನ್ಯಜೀವಿ ಧಾಮದಲ್ಲಿ ಐದು ಹುಲಿಗಳ ಅಸಹಜ ಸಾವಿನ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಆದೇಶಿಸಿದೆ. ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಪ್ರಕರಣದ ತನಿಖೆ ನಡೆಸಲು ಇಬ್ಬರು ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಿ ಆದೇಶಿಸಿದೆ.
ಮಲೆಮಹದೇಶ್ವರ ಬೆಟ್ಟದ ವನ್ಯಜೀವಿಧಾಮದಲ್ಲಿ ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳು ಅಸಹಜವಾಗಿ ಸಾವನ್ನಪ್ಪಿರುವುದು ಗುರುವಾರ ಪತ್ತೆಯಾಗಿದ್ದು, ದೇಶಾದ್ಯಂತ ಸಂಚಲನ ಮೂಡಿಸಿತ್ತು. ಈ ದುಷ್ಕೃತ್ಯದ ತನಿಖೆಗೆ ರಾಜ್ಯ ಸರ್ಕಾರ ಈಗಾಗಲೇ ವಿಶೇಷ ತನಿಖಾ ಸಮಿತಿ ರಚಿಸಿದೆ. ಇದೀಗ ಕೇಂದ್ರ ಸರ್ಕಾರ ಕೂಡ ಕ್ರಮ ಕೈಗೊಂಡಿದೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಎಸ್ಐಟಿ ರಚಿಸಿದೆ. ಪ್ರಾಧಿಕಾರದ ಬೆಂಗಳೂರು ಪ್ರಾದೇಶಿಕ ಕಚೇರಿಯ ಸಹಾಯಕ ವೃತ್ತ ನಿರೀಕ್ಷಕಿ ವಿ. ಹರಿಣಿ ಮತ್ತು ವನ್ಯಜೀವಿ ಅಪರಾಧ ನಿಯಂತ್ರಣ ಕೇಂದ್ರದ ದಕ್ಷಿಣ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಉಪನಿರ್ದೇಶಕಿ ವಿ. ಥೆನ್ಮೋಜಿ ಅವರನ್ನು ನೇಮಕ ಮಾಡಲಾಗಿದೆ. ಈ ತಂಡವು ಹುಲಿ ಸಾವಿನ ಕುರಿತಾಗಿ ತನಿಖೆ ನಡೆಸಲಿದೆ. 14 ದಿನಗಳಲ್ಲಿ ವರದಿ ಸಲ್ಲಿಸಲು ಸೂಚಿಸಲಾಗಿದ್ದು, ಇದರೊಂದಿಗೆ ಹುಲಿಗಳ ಸಾವಿನ ಕುರಿತು ಮೂರು ಸಮಿತಿಗಳು ರಚನೆಯಾಗಿವೆ.

 
			 
		 
		 
		 
		 Loading ...
 Loading ... 
		 
		 
		