ಮಹಿಳೆಯೊಬ್ಬರು ರೈಲ್ವೇ ಟ್ರ್ಯಾಕ್ ಮೇಲೆ ಕಾರು ಚಲಾಯಿಸಿ ಹುಚ್ಚಾಟ ಮೆರೆದ ಆಘಾತಕಾರಿ ಘಟನೆ ಹೈದರಾಬಾದ್ ಸಮೀಪ ನಡೆದಿದೆ.
ಶಂಕರ್ಪಲ್ಲಿಯಿಂದ ಹೈದರಾಬಾದ್ಗೆ ಹೋಗುವ ರೈಲ್ವೆ ಹಳಿಯಲ್ಲಿ ಮಹಿಳೆಯೊಬ್ಬರು ತಮ್ಮ ಕಾರನ್ನು ನೇರವಾಗಿ ಚಲಾಯಿಸಿಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಈ ಘಟನೆ ಸಾಕಷ್ಟು ಕೋಲಾಹಲಕ್ಕೆ ಕಾರಣವಾಯಿತು. ರೈಲ್ವೆ ಸಿಬ್ಬಂದಿ ಅವಳನ್ನು ತಡೆಯಲು ಪ್ರಯತ್ನಿಸಿದರೂ ಆಕೆ ಕ್ಯಾರೇ ಎನ್ನಲಿಲ್ಲ. ಸದ್ಯ, ,ಮಹಿಳೆಯ ಹುಚ್ಚಾಟದ ವಿಡಿಯೋ ವೈರಲ್ ಆಗಿದೆ.
ರೈಲ್ವೆ ಸಿಬ್ಬಂದಿ ಮಹಿಳೆಯನ್ನು ಸ್ವಲ್ಪ ದೂರ ಬೆನ್ನಟ್ಟಿದರು, ಕೊನೆಗೆ ಅವಳು ಕಾರನ್ನು ಹಳಿಯಿಂದ ದೂರಕ್ಕೆ ತಿರುಗಿಸಿ ಮರಗಳಿಗೆ ಡಿಕ್ಕಿ ಹೊಡೆದು ನಿಂತಳು. ಅಪಘಾತದಲ್ಲಿ ಕಾರಿನ ವಿಂಡೋ ಗ್ಲಾಸ್ ಪುಡಿಪುಡಿಯಾದವು. ರೈಲ್ವೆ ಪೊಲೀಸರು ಮಹಿಳೆಯನ್ನು ರಕ್ಷಿಸಿ ವಶಕ್ಕೆ ಪಡೆದರು. ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿರುವುದಾಗಿ ತಿಳಿದು ಬಂದಿದೆ. ಈ ಘಟನೆಯಿಂದಾಗಿ, ಬೆಂಗಳೂರು ಮತ್ತು ಹೈದರಾಬಾದ್ ನಡುವಿನ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

