ಬೆಂಗಳೂರು: ಶೈಕ್ಷಣಿಕ ಸಂಸ್ಥೆಗಳ ಸುತ್ತಮುತ್ತ ನಿಯಮಾನುಸಾರ 100 ಮೀಟರ್ ಅಂತರದೊಳಗೆ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಬಳಕೆ ನಿಷೇಧಿಸಲು ಆಯಾ ಮುಖ್ಯ ಶಿಕ್ಷಕರು/ ಪ್ರಾಂಶುಪಾಲರು ನೋಡಲ್ ಅಧಿಕಾರಿಗಳಾಗಿದ್ದು, ಜೊತೆಗೆ ಒಬ್ಬ ಶಿಕ್ಷಕರು ಹಾಗೂ ಒಂಬತ್ತನೇ ತರಗತಿಯ ಓರ್ವ ವಿದ್ಯಾರ್ಥಿಯನ್ನು ತಂಡದ ಮೇಲ್ವಿಚಾರಕ ಅಥವಾ ಆರೋಗ್ಯ ರಾಯಭಾರಿಯಾಗಿ ನೇಮಿಸಬೇಕೆಂದು ಶಿಕ್ಷಣ ಇಲಾಖೆಯಿಂದ ಸೂಚನೆ ನೀಡಲಾಗಿದೆ.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ನಿರ್ದೇಶಕರು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ ಘೋಷಣೆ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ.
ಶೈಕ್ಷಣಿಕ ಸಂಸ್ಥೆ ಆಡಳಿತ ಮಂಡಳಿಯು ಶಾಲಾ ಆವರಣದಲ್ಲಿ ಯಾರೂ ತಂಬಾಕು ಉತ್ಪನ್ನಗಳನ್ನು ಬಳಕೆ ಮಾಡದಂತೆ ನಿರ್ಬಂಧಿಸಬೇಕು. ಶಾಲೆಗಳ ಸಮೀಪ ತಂಬಾಕು ಉತ್ಪನ್ನಗಳ ಮಾರಾಟ ಕಂಡು ಬಂದಲ್ಲಿ ಪೊಲೀಸ್, ಸಮುದಾಯ, ಪೋಷಕರ ಸಹಾಯದಿಂದ ಮಾರಾಟ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ ತಂಬಾಕು ಮಾರಾಟಗಾರರ ಮೇಲೆ ದಂಡ ಹಾಕುವ ಅಧಿಕಾರ ನೀಡಲಾಗಿದೆ. ಅಭಿಯಾನ ಮಾದರಿಯಲ್ಲಿ ಈ ಕಾರ್ಯಕ್ರಮ ನಡೆಸಿ ಜೂನ್ 26 ರೊಳಗೆ ತಮ್ಮ ಶಾಲೆಯನ್ನು ತಂಬಾಕು ಮುಕ್ತ ಎಂದು ಘೋಷಣೆ ಮಾಡುವಂತೆ ತಿಳಿಸಲಾಗಿದೆ.