ಪ್ರಧಾನಿ ಮೋದಿ ಸಾಧನೆ ಬಗ್ಗೆ ವಿವರಿಸುತ್ತಾ ಸಿದ್ದರಾಮಯ್ಯನವರದ್ದೇ ಗ್ಯಾರಂಟಿ ಇಲ್ಲ; ಔಟ್ ಗೋಯಿಂಗ್ ಸಿಎಂ ಎಂದು ಮತ್ತೆ ವ್ಯಂಗ್ಯವಾಡಿದ ಆರ್.ಅಶೋಕ್

ಮೈಸೂರು: ಕಳೆದ ಹನ್ನೊಂದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಸಾಲುಸಾಲು ಅಭಿವೃದ್ಧಿ ಕಾರ್ಯ ನಡೆದಿದೆ. ಆದರೆ ರಾಜ್ಯದಲ್ಲಿ ಎರಡು ವರ್ಷಗಳಲ್ಲಿ ಒಂದೇ ಒಂದು ಅಭಿವೃದ್ಧಿ ಕಾರ್ಯ ನಡೆದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನಮೋಹನ್‌ ಸಿಂಗ್‌ ಅವರ 10 ವರ್ಷಗಳ ಆಡಳಿತ ಹಾಗೂ ನರೇಂದ್ರ ಮೋದಿಯವರ 11 ವರ್ಷಗಳ ಆಡಳಿತಕ್ಕೆ ಹೋಲಿಸಿದರೆ, ನಾಲ್ಕು ಪಟ್ಟು ಅಧಿಕ ಅಭಿವೃದ್ಧಿಯಾಗಿದೆ. ಜಗತ್ತಿನಲ್ಲಿ ಆರ್ಥಿಕತೆಯಲ್ಲಿ ಭಾರತ 10-11 ನೇ ಸ್ಥಾನದಲ್ಲಿತ್ತು. ಈಗ ನಾಲ್ಕನೇ ಸ್ಥಾನಕ್ಕೆ ಬಂದಿದೆ. ಮುಂದೆ ಅದನ್ನು ಮೂರನೇ ಸ್ಥಾನಕ್ಕೆ ಪ್ರಧಾನಿ ಮೋದಿ ಕೊಂಡೊಯ್ಯಲಿದ್ದಾರೆ. ಇಂದಿರಾಗಾಂಧಿ ಕಾಲದಲ್ಲಿ ಗೋದಿಗೆ ಬೇರೆ ದೇಶದ ಮುಂದೆ ಕೈಯೊಡ್ಡುವ ಪರಿಸ್ಥಿತಿ ಇತ್ತು. ಪ್ರಧಾನಿ ಮೋದಿ ಕಾಲದಲ್ಲಿ 100 ಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ ಎಂದರು.

ಯುಪಿಎ ಕಾಲದಲ್ಲಿ ತಲಾ ಆದಾಯ 6,000 ರೂ. ಇದ್ದರೆ, ಈಗ 20,000 ರೂ. ಆಗಿದೆ. ಆಗ ಗ್ಯಾಸ್‌ ಸಿಲಿಂಡರ್‌ಗೆ 450 ರೂ. ಸಬ್ಸಿಡಿ ಇದ್ದರೆ, ಈಗ 500 ರೂ. ಇದೆ. ಸಬ್ಸಿಡಿ ರಹಿತ ದರ ಆಗ 1,250 ರೂ. ಇದ್ದರೆ, ಈಗ 850 ರೂ. ಇದೆ. ಯುಪಿಎ ಹತ್ತು ವರ್ಷದಲ್ಲಿ 9 ಸಾವಿರಕ್ಕೂ ಅಧಿಕ ಉಗ್ರ ದಾಳಿಯಾಗಿತ್ತು. ಈಗ ಪ್ರತಿ ದಾಳಿ ನಡೆಯುತ್ತಿದೆ. ಮುಂಬೈಯಲ್ಲಿ ದಾಳಿಯಾದಾಗ ಅದಕ್ಕೆ ಪ್ರತ್ಯುತ್ತರ ನೀಡಲೇ ಇಲ್ಲ. ಪಹಲ್ಗಾಮ್‌ನಲ್ಲಿ ದಾಳಿಯಾದಾಗ ಕೂಡಲೇ ಉಗ್ರರ ತಾಣಗಳನ್ನು ನಮ್ಮ ಯೋಧರು ಧ್ವಂಸ ಮಾಡಿದ್ದಾರೆ ಎಂದರು.

ಹಿಂದೆ 387 ಮೆಡಿಕಲ್‌ ಕಾಲೇಜುಗಳಿದ್ದು, ಈಗ 704 ಮೆಡಿಕಲ್‌ ಕಾಲೇಜುಗಳಿವೆ. ಆಗ 74 ವಿಮಾನ ನಿಲ್ದಾಣಗಳಿದ್ದು, ಈಗ 149 ಆಗಿದೆ. ಆಗ ರಾಷ್ಟ್ರೀಯ ಹೆದ್ದಾರಿ 91,000 ಕಿ.ಮೀ. ಇದ್ದಿದ್ದು, ಈಗ 1.45 ಲಕ್ಷ ಕಿ.ಮೀ. ಆಗಿದೆ. 7 ಏಮ್ಸ್‌ ಇದ್ದಿದ್ದು, 22 ಆಗಿದೆ. 82,000 ಮೆಡಿಕಲ್‌ ಸೀಟುಗಳಿದ್ದಿದ್ದು, ಈಗ 1.50 ಲಕ್ಷ ಆಗಿದೆ. ಆಗ ದೇಶದ ಬಜೆಟ್‌ 17 ಲಕ್ಷ ಕೋಟಿ ರೂ. ಇದ್ದರೆ, ಈಗ 50.65 ಲಕ್ಷ ಕೋಟಿ ರೂ. ಆಗಿದೆ. ಎಲ್‌ಇಡಿ ಬಲ್ಬ್‌ಗೆ ಆಗ 450 ರೂ. ಇದ್ದಿದ್ದು, ಈಗ 70 ರೂ. ಗೆ ಸಿಗುತ್ತಿದೆ ಎಂದರು.

ಮೊದಲು ಬೇರೆ ದೇಶದಲ್ಲಿ ಬುಲೆಟ್‌ ರೈಲು ನೋಡುತ್ತಿದ್ದೆವು. ಈಗ ನಮ್ಮ ದೇಶದಲ್ಲೇ 60% ಕಾಮಗಾರಿ ಮುಗಿದು ಮುಂದೆ ಬುಲೆಟ್‌ ರೈಲು ಬರಲಿದೆ. ಕೃಷಿಗೆ ಮೊದಲು 30,000 ಕೋಟಿ ರೂ.ಸಬ್ಸಿಡಿ ಸಿಗುತ್ತಿದ್ದರೆ, ಈಗ 1.27 ಲಕ್ಷ ಕೋಟಿ ರೂ. ಸಬ್ಸಿಡಿ ನೀಡಲಾಗುತ್ತಿದೆ. ಆಗ 14 ಕೋಟಿ ಅಡುಗೆ ಅನಿಲ ಸಂಪರ್ಕವಿದ್ದರೆ, ಈಗ 31 ಕೋಟಿ ಆಗಿದೆ. ಹನ್ನೊಂದು ವರ್ಷಗಳಲ್ಲಿ 4 ಕೋಟಿ ಮನೆ, 11 ಕೋಟಿ ಶೌಚಾಲಯ ನಿರ್ಮಿಸಲಾಗಿದೆ. 27 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್‌ನವರು ಎಂದಿಗೂ ನಕ್ಸಲ್‌ ಪರವಾಗಿದ್ದರು. ಈಗ ನಕ್ಸಲ್‌ ಚಳವಳಿಯನ್ನು ಸಂಪೂರ್ಣವಾಗಿ ಮಟ್ಟಹಾಕುವ ಗುರಿ ಇರಿಸಿಕೊಳ್ಳಲಾಗಿದೆ. ಈಶಾನ್ಯ ರಾಜ್ಯಗಳಲ್ಲೂ ದೊಡ್ಡ ಅಭಿವೃದ್ಧಿ ಕೆಲಸಗಳಾಗಿವೆ. ಜಮ್ಮು-ಕಾಶ್ಮೀರವನ್ನು ಬಿಟ್ಟುಬಿಡೋಣ ಎಂಬ ಮನಸ್ಥಿತಿ ಇತ್ತು. ವಿಶೇಷ ಸ್ಥಾನಮಾನ ರದ್ದಾದ ಬಳಿಕ ಅಲ್ಲಿ ಅಭಿವೃದ್ಧಿ ಹೆಚ್ಚಿದೆ. ಪ್ರವಾಸೋದ್ಯಮದಿಂದ ಅಲ್ಲಿನ ಜನರ ಆದಾಯ ಅಧಿಕವಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದೇ ಗ್ಯಾರಂಟಿ ಇಲ್ಲ. ಅವರು ಔಟ್‌ಗೋಯಿಂಗ್‌ ಸಿಎಂ. ಇವರ ಸರ್ಕಾರ ಎರಡು ವರ್ಷದಲ್ಲಿ ಏನೂ ಸಾಧನೆ ಮಾಡಿಲ್ಲ. ಡಿ.ಕೆ.ಶಿವಕುಮಾರ್‌ ಪ್ರತ್ಯೇಕ ಕೋಟೆ ಕಟ್ಟಿಕೊಂಡಿದ್ದಾರೆ. ಎಂ.ಬಿ.ಪಾಟೀಲ್‌, ಸತೀಶ್‌ ಜಾರಕಿಹೊಳಿ ಪ್ರತ್ಯೇಕವಾಗಿದ್ದಾರೆ. ಎರಡು ವರ್ಷದಲ್ಲಿ ಒಂದೇ ಒಂದು ನೀರಾವರಿ ಯೋಜನೆ ಜಾರಿಯಾಗಿಲ್ಲ ಎಂದು ದೂರಿದರು.

ಕಾಂಗ್ರೆಸ್‌ನಲ್ಲಿ ಎಲ್ಲರೂ ಸಿಎಂ ಆಗುತ್ತೇನೆಂದು ಹೇಳುತ್ತಿದ್ದಾರೆ. ಪರಮೇಶ್ವರ್‌, ಡಿ.ಕೆ.ಶಿವಕುಮಾರ್‌ ಸಿಎಂ ಆಗಲು ಕಾಯುತ್ತಿದ್ದಾರೆ. ಗ್ಯಾರಂಟಿಗಳಿಂದಾಗಿ ಯಾವುದೇ ಕೆಲಸ ನಡೆಯುತ್ತಿಲ್ಲ. ಸರ್ಕಾರವೇ ಬಿದ್ದು ತೊಲಗಲಿ ಎಂದು ಜನರು ಬಯಸುತ್ತಿದ್ದಾರೆ. ಸಿಎಂ ಕುರ್ಚಿಯನ್ನು ನಾಲ್ಕು ಜನರು ಎಳೆಯುತ್ತಿದ್ದಾರೆ. ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣವನ್ನು ಬಿಜೆಪಿ ಹೊರಗೆ ಎಳೆದು ತಂದಿದೆ ಎಂದರು.

ಕಾಲ್ತುಳಿತ ದುರಂತಕ್ಕೆ ಸರ್ಕಾರವೇ ಕಾರಣವಾಗಿದೆ. ಆದರೆ ಪೊಲೀಸರ ಮೇಲೆ ತಪ್ಪು ಹೊರಿಸಲಾಗುತ್ತಿದೆ. ರಾಜ್ಯಪಾಲರನ್ನು ಮುಖ್ಯಮಂತ್ರಿಗಳೇ ಆಹ್ವಾನಿಸಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಮುಖ್ಯ ಕಾರ್ಯದರ್ಶಿಯೇ ಕರೆ ಮಾಡಿ ರಾಜ್ಯಪಾಲರನ್ನು ಆಹ್ವಾನಿಸಿದ್ದಾರೆ. ಆದರೆ ಮೊದಲು ಆ ವಿಷಯವನ್ನು ಹೇಳಿರಲಿಲ್ಲ. ಇವರ ತಪ್ಪು ಮುಚ್ಚಿಹಾಕಲು ಗೋವಿಂದರಾಜು ಅವರ ವಿರುದ್ಧ ಕ್ರಮ ವಹಿಸಲಾಗಿದೆ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read