ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ 25 ವರ್ಷದ ವ್ಯಕ್ತಿಯೊಬ್ಬನ್ನು ಅಡುಗೆ ಮಾಡದ ಕಾರಣಕ್ಕೆ ತಾಯಿಯನ್ನು ಕೊಂದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಮೇ 24 ರಂದು ರಾತ್ರಿ ಥಾಲ್ನರ್ ಪ್ರದೇಶದ ವಾಥೋಡ್ ಗ್ರಾಮದಲ್ಲಿ ನಡೆದಿದೆ. ತಿಪಾಬಾಯಿ ಪವಾರ(65) ಕೊಲೆಯಾದವರು. ತನ್ನ ಮಗ ಅವ್ಲೇಶ್ ಗೆ ಮೀನಿನ ಊಟ ತಯಾರಿಸಿ ತಮ್ಮ ಗುಡಿಸಲಿನಲ್ಲಿ ಮಲಗಲು ಹೋಗಿದ್ದರು. ಮೀನಿನ ವಾಸನೆಯಿಂದ ಬಂದ ಬೀದಿ ನಾಯಿಯೊಂದು ಮನೆಗೆ ನುಗ್ಗಿ ಊಟ ಹಾಳು ಮಾಡಿತ್ತು.
ಮದ್ಯಪಾನ ಮಾಡಿದ್ದ ಅವ್ಲೇಶ್ ತಡವಾಗಿ ಮನೆಗೆ ಮರಳಿದ್ದಾನೆ. ಊಟ ಸರಿಯಲ್ಲ ಬೇರೆ ಅಡುಗೆ ಮಾಡು ಎಂದು ತಾಯಿಗೆ ಹೇಳಿದ್ದಾನೆ.
ಮಲಗಿದ್ದ ತಿಪಾಬಾಯಿ ಪ್ರತಿಕ್ರಿಯಿಸದಿದ್ದಾಗ, ಕೋಪಗೊಂಡು ಮರದ ಕೋಲಿನಿಂದ ಆಕೆಯ ತಲೆಯ ಮೇಲೆ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಬೆಳಿಗ್ಗೆ ಎಚ್ಚರವಾದಾಗ ಅವ್ಲೇಶ್ ತನ್ನ ತಾಯಿ ಚಲನರಹಿತವಾಗಿ ಬಿದ್ದಿರುವುದನ್ನು ಕಂಡು ಸಂಬಂಧಿಕರಿಗೆ ಕರೆ ಮಾಡಿದ್ದಾನೆ, ಅವರು ಸ್ಥಳಕ್ಕೆ ಧಾವಿಸಿದಾಗ ವೃದ್ಧ ಮಹಿಳೆ ತಲೆಗೆ ತೀವ್ರ ಗಾಯವಾಗಿ ಮೃತಪಟ್ಟಿರುವುದು ಕಂಡುಬಂದಿತು. ಸುದ್ದಿ ತಿಳಿದ ನಂತರ ಸ್ಥಳಕ್ಕೆ ಬಂದ ಪೊಲೀಸರು ಅವ್ಲೇಶ್‌ನನ್ನು ವಶಕ್ಕೆ ಪಡೆದಿದ್ದಾರೆ.
ಥಾಲ್ನರ್ ಪೊಲೀಸ್ ಠಾಣೆಯಲ್ಲಿ ಮಗನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಪ್ರಸ್ತುತ ತನಿಖೆ ನಡೆಯುತ್ತಿದೆ.