ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆ ಅಬ್ಬರ ಜೋರಾಗಿದ್ದು, ವರುಣಾರ್ಭಟಕ್ಕೆ ಸಾಲು ಸಾಲು ಅನಾಹುತ, ಅವಾಂತರಗಳು ಸೃಷ್ಟಿಯಾಗುತ್ತಿವೆ. ಭಾರಿ ಮಳೆಯಿಂದಾಗಿ ಎರಡು ಕಾರುಗಳು ನಿಯತ್ರಣ ತಪ್ಪಿ ಹೇಮಾವತಿ ನದಿಗೆ ಉರುಳಿ ಬಿದ್ದಿವೆ.
ಕೇವಲ ಒಂದು ಗಂಟೆಯ ಅಂತರದಲ್ಲಿ ಎರಡು ಘಟನೆಗಳು ಸಂಭವಿಸಿದ್ದು, ಹೇಮಾವತಿ ನದಿಗೆ ಕಾರುಗಳು ಬಿದ್ದಿವೆ. ಚಿಕ್ಕಮಗಳೂರಿನ ಬಣಕಲ್ ಸಮೀಪದ ಚಿಕ್ಕಮಕ್ಕಿಯಲ್ಲಿ ಈ ಘಟನೆ ನಡೆದಿದೆ.
ತುಮಕೂರು ಮೂಲದ ನಲವರು ಪ್ರವಾಸಿಗರಿದ್ದ ಕಾರು ಇಂದು ಬೆಳಿಗ್ಗೆ ಚಾಲಕನ ನಿಯಂತ್ರಣ ತಪ್ಪಿ ಹೇಮಾವತಿ ನದಿಗೆ ಬಿದ್ದಿದೆ. ವಿಷಯ ತಿಳಿದು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಕಾರನ್ನು ಮೇಲಕೆತ್ತಲಾಗಿದೆ.
ಇದಾದ ಕೆಲವೇ ಸಮಯದಲ್ಲಿ ಮತ್ತೊಂದು ಕಾರು ಸೇತುವೆ ಮೇಲಿಂದ ಹೇಮಾವತಿ ನದಿಗೆ ಬಿದ್ದಿದೆ. ಮಳೆ ಅಬ್ಬರಕ್ಕೆ ರಸ್ತೆ ಕಾಣದಂತಾಗಿ ಚಾಲಕನ ನಿಯಂತ್ರನ ತಪ್ಪಿ ಈ ಅವಘಡ ಸಂಭವಿಸಿದೆ. ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದು, ಕಾರನ್ನು ನದಿಯಿಂದ ಮೇಲಕೆತ್ತಲಾಗುತ್ತಿದೆ.
ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮೇ 27ರವರೆಗೆ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದ್ದು, ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.