ಬೆಳಗಾವಿ: ಯುವ ಕ್ರಿಕೇಟಿಗರೊಬ್ಬರಿಗೆ ಐಪಿಎಲ್ ಹೆಸರಲ್ಲಿ ವಂಚನೆ ಎಸಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆಯ್ಕೆ ಮಾಡುವುದಾಗಿ ಹೇಳಿ 23 ಲಕ್ಷ ರೂಪಾಯಿ ವಂಚಿಸಲಾಗಿದೆ. ಈ ಬಗ್ಗೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ರಾಕೇಶ್ ಯಡುರೆ (19) ಹಣ ಕಳೆದುಕೊಂಡಿರುವ ಯುವ ಕ್ರಿಕೇಟಿಗ. ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡುತ್ತಿದ್ದ ರಾಕೇಶ್ ಗೆ ಐಪಿಎಲ್ ಆಡಬೇಖೆಂಬ ಮಹದಾಸೆ. 2024ರ ಮೇ ನಲ್ಲಿ ಹೈದರಾಬಾದ್ ನಲ್ಲಿ ನಡೆದಿದ್ದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯವೊಂದರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಬಂದಿದ್ದ ಬಳಿಕ ರೈಸಿಂಗ್ ಭಾರತ್ ಕ್ರಿಕೆಟ್ ಲೀಗ್ ಟೂರ್ನಿಗೆ ಆಯ್ಕೆಯ ಟ್ರೈಯಲ್ ನಲ್ಲಿ ಭಾಗಿಯಾಗಿದ್ದ. ಈ ಸಂದರ್ಭದಲ್ಲಿ ಕ್ರಿಕೆಟ್ ಸಮಿತಿ ಆಯ್ಕೆಗಾರರು ಪರಿಚಯವಾಗಿದ್ದಾರೆ.
ಬಳಿಕ ನಾಲ್ಕು ತಿಂಗಿಳ ನಂತರ ಇನ್ಸ್ ಸ್ಟಾಗ್ರಾಂ ಗೆ ಬಂದ ಸಂದೇಶ ಹಣ ಕಳೆದುಕೊಳ್ಳಲು ಕಾರಣವಾಗಿದೆ. ಸುಶಾಂತ್ ಶ್ರೀವಾಸ್ತವ್ ಎಂಬ ಹೆಸರಿನಿಂದ ಬಂದ ಸಂದೇಶದಲ್ಲಿ ನಿಮ್ಮನ್ನು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರಿಸಿಕೊಳ್ಳುತ್ತೇವೆ. ಈ ಅಪ್ಲಿಕೇಷನ್ ಫರಮ್ ತುಂಬಿ 2000 ರೂ ಕಳುಹಿಸುವಂತೆ ತಿಳಿಸಲಾಗಿತ್ತು. ಇದನ್ನು ನಂಬಿ ಹಣ ವರ್ಗಾವಣೆ ಮಾಡಿದ್ದ ರಾಕೇಶ್ ಗೆ ವಂಚಕರು ಹಂತ ಹಂತವಾಗಿ 23 ಲಕ್ಷ ವಂಚಿಸಿದ್ದಾರೆ. 2025ರ ಏಪ್ರಿಲ್ 19ರವರೆಗೆ 23,53,550 ರೂ ಹಣವನ್ನು ಆನ್ ಲೈನ್ ಮೂಲಕ ವಂಚಕರು ವರ್ಗಾಯಿಸಿಕೊಂಡಿದ್ದಾರೆ.
ಬರೋಬ್ಬರಿ 23 ಲಕ್ಷ ಹಣ ವರ್ಗಾಯಿಸಿದರೂ ಕ್ರಿಕೆಟ್ ತಂಡದ ಆಯ್ಕೆ ಬಗ್ಗೆ ಸುಳಿವಿಲ್ಲ. ಇದರಿಂದ ಅನುಮಾನಗೊಂಡ ರಾಕೇಶ್ ಬೆಳಗಾವಿ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.