ಮದುವೆಯ ಹೆಸರಿನಲ್ಲಿ ಮೋಸ ಮಾಡುತ್ತಿದ್ದ 23 ವರ್ಷದ ಯುವತಿ ಅನುರಾಧ ಪಾಸ್ವಾನ್ಳನ್ನು ಸವಾಯಿ ಮಾಧೋಪುರ ಪೊಲೀಸರು ಭೋಪಾಲ್‌ನಲ್ಲಿ ಬಂಧಿಸಿದ್ದಾರೆ. ಈಕೆ ಕಳೆದ 7 ತಿಂಗಳಲ್ಲಿ ಸುಮಾರು 25 ಪುರುಷರನ್ನು ಮದುವೆಯಾಗಿ, ಅಮೂಲ್ಯ ವಸ್ತುಗಳೊಂದಿಗೆ ಪರಾರಿಯಾಗಿದ್ದಳು ಎಂದು ಆರೋಪಿಸಲಾಗಿದೆ.
ಸಂಘಟಿತ ಮದುವೆ ವಂಚನೆ ಜಾಲದ ಪ್ರಮುಖ ಸೂತ್ರಧಾರಿಯಾಗಿದ್ದ ಅನುರಾಧ, ಮದುವೆಗೆ ವಧು ಹುಡುಕುತ್ತಿದ್ದ ಹತಾಶ ವರರನ್ನು ಗುರಿಯಾಗಿಸಿಕೊಂಡು ಈ ವಂಚನೆ ಮಾಡುತ್ತಿದ್ದಳು. ಮದುವೆಯಾದ ಕೆಲವೇ ದಿನಗಳಲ್ಲಿ ಆಭರಣ ಮತ್ತು ನಗದೊಂದಿಗೆ ಪರಾರಿಯಾಗುತ್ತಿದ್ದಳು.
ಕಾನೂನು ದಾಖಲೆಗಳೊಂದಿಗೆ ವಂಚನೆ:
ಪೊಲೀಸ್ ತನಿಖೆ ಪ್ರಕಾರ, ಅನುರಾಧ ತನ್ನ ವಂಚನೆಗೆ ಸೂಕ್ತ ಯೋಜನೆ ರೂಪಿಸಿಕೊಂಡಿದ್ದಳು. ಆಕೆ ಕಾನೂನುಬದ್ಧ ದಾಖಲೆಗಳೊಂದಿಗೆ ವರನನ್ನು ಮದುವೆಯಾಗಿ, ಯಾವುದೇ ಅನುಮಾನ ಬರದಂತೆ ಕೆಲ ದಿನಗಳ ಕಾಲ ಮನೆಯಲ್ಲಿ ಉಳಿದು, ನಂತರ ಮನೆಯಲ್ಲಿದ್ದ ಎಲ್ಲಾ ಬೆಲೆಬಾಳುವ ವಸ್ತುಗಳೊಂದಿಗೆ ನಾಪತ್ತೆಯಾಗುತ್ತಿದ್ದಳು.
ಗೋಪ್ಯ ಕಾರ್ಯಾಚರಣೆಯಿಂದ ಬಂಧನ:
ಸವಾಯಿ ಮಾಧೋಪುರದ ನಿವಾಸಿಯಾಗಿರುವ ವಿಷ್ಣು ಶರ್ಮಾ ಎಂಬುವವರು ಪೊಲೀಸರಿಗೆ ದೂರು ನೀಡಿದಾಗ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿತು. ವಿಷ್ಣು ಶರ್ಮಾ, ಸುನೀತಾ ಮತ್ತು ಪಪ್ಪು ಮೀನಾ ಎಂಬ ಇಬ್ಬರು ಏಜೆಂಟ್‌ಗಳಿಗೆ ವಧುವನ್ನು ಹುಡುಕಲು ₹2 ಲಕ್ಷ ನೀಡಿದ್ದರು. ಏಜೆಂಟ್‌ಗಳು ವಿಷ್ಣುವಿಗೆ ಅನುರಾಧಳನ್ನು ಪರಿಚಯಿಸಿ, ಏಪ್ರಿಲ್ 20ರಂದು ಮದುವೆ ಮಾಡಿಸಿದ್ದರು. ಆದರೆ, ಮೇ 2ರಂದು ಅನುರಾಧ ಆಭರಣ, ನಗದು, ಎಲೆಕ್ಟ್ರಾನಿಕ್ಸ್ ವಸ್ತುಗಳೊಂದಿಗೆ ಪರಾರಿಯಾಗಿದ್ದಳು.
ಇದೇ ರೀತಿಯ ಹಲವು ದೂರುಗಳು ಬಂದ ನಂತರ, ಪೊಲೀಸರು ಈ ವಿಚಿತ್ರ ಪ್ರಕರಣವನ್ನು ಭೇದಿಸಲು ಗೋಪ್ಯ ಕಾರ್ಯಾಚರಣೆ ಆರಂಭಿಸಿದರು. ಓರ್ವ ಕಾನ್‌ಸ್ಟೇಬಲ್ ವರನಂತೆ ನಟಿಸಿ, ಏಜೆಂಟ್‌ಗಳೊಂದಿಗೆ ಸಂಪರ್ಕ ಸಾಧಿಸಿದರು. ಅನುರಾಧಳ ಫೋಟೋ ಪಡೆದ ನಂತರ, ಕಾನ್‌ಸ್ಟೇಬಲ್ ತಮ್ಮ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ನಂತರ ಭೋಪಾಲ್‌ನಲ್ಲಿ ನಡೆದ ಪೊಲೀಸ್ ದಾಳಿಯಲ್ಲಿ ವಂಚಕಿ ಅನುರಾಧ ಸಿಕ್ಕಿಬಿದ್ದಳು.
ಅನುರಾಧ ಗ್ಯಾಂಗ್ ಸೇರಿದ್ದು ಹೇಗೆ?
ಸರಳ ಹಿನ್ನೆಲೆಯಿಂದ ಬಂದಿರುವ ಅನುರಾಧ ಉತ್ತರ ಪ್ರದೇಶದ ಮಹಾರಾಜ್‌ಪುರದ ನಿವಾಸಿ. ಅಲ್ಲಿ ಆಕೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಕೌಟುಂಬಿಕ ಕಲಹಗಳಿಂದಾಗಿ ಪತಿಯಿಂದ ವಿಚ್ಛೇದನ ಪಡೆದ ನಂತರ ಭೋಪಾಲ್‌ಗೆ ಬಂದಿದ್ದಳು. ಭೋಪಾಲ್‌ನಲ್ಲಿ, ಮದುವೆಯ ಹೆಸರಿನಲ್ಲಿ ಹತಾಶ ವರರನ್ನು ಗುರಿಯಾಗಿಸಿಕೊಂಡು ಹಣ ದೋಚುವ ವಂಚಕರ ಗ್ಯಾಂಗ್ ಸೇರಿಕೊಂಡಳು. ವಿಷ್ಣು ಶರ್ಮಾ ಮನೆಯಿಂದ ಪರಾರಿಯಾದ ನಂತರ ಅನುರಾಧ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಳು ಎಂದು ವರದಿಯಾಗಿದೆ. ಈ ವಂಚನೆ ಜಾಲದಲ್ಲಿ ಭಾಗಿಯಾಗಿರುವ ಇತರ ಶಂಕಿತರನ್ನು ಸಹ ಪೊಲೀಸರು ಗುರುತಿಸಿದ್ದು, ತನಿಖೆ ಮುಂದುವರಿದಿದೆ.