ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಗೆ ಜಾಮೀನು ಸಿಕ್ಕರೂ ಜೈಲಿನಿಂದ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.
ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ರನ್ಯಾ ರಾವ್ ಗೆ ಬೆಂಗಳೂರಿನ ಆರ್ಥಿಕ ವ್ಯವಹಾರಗಳ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಆದರೆ ರನ್ಯಾ ರಾವ್ ವಿರುದ್ಧ ಕಾಫಿಪೋಸಾ ಅಡಿಯಲ್ಲಿ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಬಿಡುಗಡೆ ಸಾಧ್ಯವಾಗಿಲ್ಲ.
ಈ ಹಿನ್ನೆಲೆಯಲ್ಲಿ ರನ್ಯಾ ರಾವ್ ತಾಯಿ ಹೆಚ್.ರೋಹಿಣಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ರನ್ಯಾ ರಾವ್ ತಾಯಿ ರೋಹಿಣಿ ಹೈಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ಕಾಫಿಪೋಸಾ ಅಡಿ ರನ್ಯಾ ಬಂಧನ ಕಾನೂನುಬಾಹಿರ ಎಂದು ಘೋಷಿಸಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.
ಕಾಫಿಪೋಸಾ ಅಡಿ ಬಂಧಿಸುವಾಗ ಪ್ರಕ್ರಿಯೆ ಪಾಲಿಸಿಲ್ಲ ಎಂದು ರನ್ಯಾ ರಾವ್ ಪರ ವಕೀಲರು ವಾದ ಮಂಡಿಸಿದ್ದಾರೆ. ರನ್ಯಾ ರಾವ್ ಪರ ವಕೀಲರ ವಾದಕ್ಕೆ ಡಿಎಸ್ ಜಿ ಶಾಂತಿಭೂಷಣ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಲಿಖಿತ ಆಕ್ಷೇಪಣೆ ಸಲ್ಲಿಸಲು 4 ವಾರಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್, ಜೂನ್ 3ಕ್ಕೆ ವಿಚಾರಣೆ ಮುಂದೂಡಿದೆ.