ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನ ಮಾಡಿದ ಕಾರಾಗೃಹ ಸಿಬ್ಬಂದಿ ಜೈಲು ಪಾಲಾಗಿದ್ದು, ಇದರ ಬೆನ್ನಲ್ಲೇ ಮತ್ತೊಬ್ಬ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ವಾರ್ಡರ್ ಎಸ್.ಬಿ. ಪುನೀತ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತೊಣಚಿಕೊಪ್ಪಲು ನಿವಾಸಿ ಎಸ್. ಪವನ್ ನೀಡಿದ ದೂರಿನ ಮೇರೆಗೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಸಿಎಂ ಸಿದ್ದರಾಮಯ್ಯ ಬಗ್ಗೆ ವಾರ್ಡರ್ ಮಧುಕುಮಾರ್ ಲಘುವಾಗಿ ಮಾತನಾಡಿದ್ದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಕಾರಾಗೃಹದ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಇದನ್ನು ಪವನ್ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದರು. ಮೇ 7ರಂದು ಪವನ್ ಅವರಿಗೆ ಕರೆ ಮಾಡಿದ ಪುನೀತ್ ಧಮ್ಕಿ ಹಾಕಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಬಗ್ಗೆ ಮಧುಕುಮಾರ್ ಮಾತನಾಡಿರುವುದು ಸರಿ ಇದೆ. ನೀವು ಏಕೆ ಪ್ರತಿಭಟನೆ ಮಾಡಿದ್ದೀರಿ ಎಂದು ಧಮ್ಕಿ ಹಾಕಿದ್ದು, ಈ ಬಗ್ಗೆ ಪವನ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪುನೀತ್ ನನ್ನು ಬಂಧಿಸಿದ್ದಾರೆ.