ನೂರಾರು ತಿರಸ್ಕಾರಗಳ ನಂತರ ಸಿಕ್ತು ಕೆಲಸ ; IIT ಹಿನ್ನೆಲೆ ಇಲ್ಲದಿದ್ದರೂ 500 % ಸಂಬಳ ಏರಿಕೆ !

ಪ್ರಸ್ತುತ ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯ ಇಂಜಿನಿಯರ್‌ಗಳದ್ದೇ ಕಾರುಬಾರು. ಆದರೆ, ಈ ಯಶಸ್ವಿ ತಂತ್ರಜ್ಞಾನಿಗಳಲ್ಲಿ ಹೆಚ್ಚಿನವರು ಐಐಟಿ, ಐಐಎಂ, ಐಐಐಟಿ, ಎನ್‌ಐಟಿಯಂತಹ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಬಂದವರಾಗಿರುತ್ತಾರೆ. ಇಂತಹ ಸ್ಪರ್ಧಾತ್ಮಕ ಜಗತ್ತಿನಲ್ಲಿ ಟೈಯರ್-3 ಕಾಲೇಜುಗಳಿಂದ ಪದವಿ ಪಡೆದ ಇಂಜಿನಿಯರ್‌ಗಳು ಉತ್ತಮ ಉದ್ಯೋಗ ಗಿಟ್ಟಿಸಿಕೊಳ್ಳಲು ಹೆಚ್ಚಿನ ಪರಿಶ್ರಮ ಪಡಬೇಕಾಗುತ್ತದೆ. ಆದರೆ, ಸಾಗರ್ ಕುಮಾರ್ ಎಂಬ ಯುವಕ ಇಂತಹ ಎಲ್ಲ ಅಡೆತಡೆಗಳನ್ನು ಮೀರಿ ಗೂಗಲ್‌ನಲ್ಲಿ ತಮ್ಮ ಕನಸಿನ ಉದ್ಯೋಗವನ್ನು ಪಡೆದಿದ್ದಾರೆ, ಅಷ್ಟೇ ಅಲ್ಲದೆ ಬರೋಬ್ಬರಿ 500% ಸಂಬಳ ಹೆಚ್ಚಳದೊಂದಿಗೆ ಮಿಂಚುತ್ತಿದ್ದಾರೆ !

ಟೈಯರ್-3 ಕಾಲೇಜಿನಿಂದ ಪದವಿ ಪಡೆದ ನಂತರ ಸಾಗರ್ ಕುಮಾರ್ ತಮ್ಮ ವೃತ್ತಿ ಜೀವನವನ್ನು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ನಲ್ಲಿ 3.3 ಲಕ್ಷ ರೂಪಾಯಿಗಳ ವಾರ್ಷಿಕ ಸಂಬಳದೊಂದಿಗೆ ಆರಂಭಿಸಿದರು. ಟಿಸಿಎಸ್‌ನಲ್ಲಿ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಅವರು, ತಮ್ಮ ಕೆಲಸದಲ್ಲಿ ಉತ್ತಮ ಸಾಧನೆ ತೋರಿದ್ದಕ್ಕಾಗಿ ಪ್ರಶಸ್ತಿಗಳನ್ನು ಸಹ ಪಡೆದರು. ಆದರೆ, ಸಾಗರ್‌ಗೆ ಇದಷ್ಟೇ ಸಾಕಾಗಿರಲಿಲ್ಲ. ಅವರು ಏನಾದರೂ ದೊಡ್ಡದನ್ನು ಸಾಧಿಸಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು.

ಇದಕ್ಕಾಗಿ ಸಾಗರ್ ಲಿಂಕ್ಡ್‌ಇನ್, ವೆಲ್‌ಫೌಂಡ್ ಮತ್ತು ಗ್ಲಾಸ್‌ಡೋರ್‌ನಂತಹ ವೇದಿಕೆಗಳಲ್ಲಿ 500ಕ್ಕೂ ಹೆಚ್ಚು ಕಂಪನಿಗಳಿಗೆ ಅರ್ಜಿ ಸಲ್ಲಿಸಿದರು. ಆದರೆ, ಆಶ್ಚರ್ಯವೆಂದರೆ ಒಂದೇ ಒಂದು ಅರ್ಜಿಗೆ ಅವರಿಗೆ ಪ್ರತಿಕ್ರಿಯೆ ಬರಲಿಲ್ಲ! ಐಐಟಿ ಮತ್ತು ಇತರ ಉನ್ನತ ಕಾಲೇಜುಗಳ ಗೆಳೆಯರಂತೆ ತಮ್ಮಲ್ಲಿ ಸ್ಪರ್ಧಾತ್ಮಕ ಪ್ರೋಗ್ರಾಮಿಂಗ್ ಮತ್ತು ಡಿಎಸ್‌ಎ ಕೌಶಲ್ಯಗಳ ಕೊರತೆಯಿರುವುದನ್ನು ಅವರು ಅರಿತುಕೊಂಡರು. ಹೀಗಾಗಿ, ತಮ್ಮ ಅಭಿವೃದ್ಧಿ ಕೌಶಲ್ಯಗಳು ಮತ್ತು ಸಮಸ್ಯೆ ಪರಿಹರಿಸುವ ಸಾಮರ್ಥ್ಯದ ಮೇಲೆ ಗಮನ ಕೇಂದ್ರೀಕರಿಸಿ, ಉನ್ನತ ಉದ್ಯೋಗದಾತರಿಗೆ ತಮ್ಮನ್ನು ಹೆಚ್ಚು ಆಕರ್ಷಕವಾಗಿಸಲು ಅವುಗಳನ್ನು ಮತ್ತಷ್ಟು ಬಲಪಡಿಸಿಕೊಂಡರು.

ಸತತ ತಿರಸ್ಕಾರಗಳಿಂದ ಧೃತಿಗೆಡದ ಸಾಗರ್ ತಮ್ಮ ತಂತ್ರವನ್ನು ಬದಲಾಯಿಸಿದರು. ಲಿಂಕ್ಡ್‌ಇನ್ ಮೂಲಕ ಉನ್ನತ ಕಂಪನಿಗಳ ವೃತ್ತಿಪರರೊಂದಿಗೆ ಸಂಪರ್ಕ ಸಾಧಿಸಿ, ಅಮೂಲ್ಯವಾದ ಉಲ್ಲೇಖಗಳು ಮತ್ತು ಮಾರ್ಗದರ್ಶನ ಪಡೆದರು. ಅಷ್ಟೇ ಅಲ್ಲದೆ, ಟಾಪ್‌ಮೇಟ್‌ನಂತಹ ವೇದಿಕೆಗಳ ಮೂಲಕ ಉದ್ಯಮ ತಜ್ಞರಿಂದ ತಮ್ಮ ರೆಸ್ಯೂಮ್ ಅನ್ನು ಪರಿಶೀಲಿಸಿಕೊಂಡರು ಮತ್ತು ಟಿಸಿಎಸ್‌ನಲ್ಲಿ ಕೆಲಸ ಮಾಡುತ್ತಿರುವಾಗಲೇ ಡಿಎಸ್‌ಎಗೆ ತಯಾರಿ ನಡೆಸಲು ಪ್ರಾರಂಭಿಸಿದರು.

ಸುಮಾರು ಒಂಬತ್ತು ತಿಂಗಳ ಹಿಂದೆ ಗೂಗಲ್‌ನಿಂದ ಸಾಗರ್‌ಗೆ ಸಂದರ್ಶನಕ್ಕೆ ಕರೆ ಬಂದಿತು. ಆದರೆ, ಸಾಕಷ್ಟು ತಯಾರಿ ಇಲ್ಲದ ಕಾರಣ ಅವರು ಮೊದಲ ಹಂತದಲ್ಲೇ ವಿಫಲರಾದರು. ಈ ಹಿನ್ನಡೆಯಿಂದ ಪಾಠ ಕಲಿತ ಸಾಗರ್, ತಮ್ಮ ತಯಾರಿಯನ್ನು ಇನ್ನಷ್ಟು ಗಂಭೀರವಾಗಿ ತೆಗೆದುಕೊಂಡರು. ಡಿಎಸ್‌ಎಯಲ್ಲಿ ಪರಿಣತಿ ಸಾಧಿಸಿದರು ಮತ್ತು ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಲು ಮಾಕ್ ಇಂಟರ್‌ವ್ಯೂಗಳು ಮತ್ತು ಇತರ ತರಬೇತಿಗಳನ್ನು ಪಡೆದರು.

ಅಂತಿಮವಾಗಿ ಈ ವರ್ಷದ ಮಾರ್ಚ್‌ನಲ್ಲಿ ಸಾಗರ್‌ಗೆ ಅದೃಷ್ಟ ಖುಲಾಯಿಸಿತು. ಸ್ನೇಹಿತರೊಬ್ಬರ ಉಲ್ಲೇಖದ ಮೂಲಕ ಗೂಗಲ್‌ನಲ್ಲಿ ಮತ್ತೊಮ್ಮೆ ಪ್ರಯತ್ನಿಸುವ ಅವಕಾಶ ಸಿಕ್ಕಿತು. ಈ ಬಾರಿ ಸಾಗರ್ ತಮ್ಮೆಲ್ಲಾ ಕೌಶಲ್ಯಗಳನ್ನು ಧಾರೆ ಎರೆದರು. ಕಠಿಣವಾದ ಮೂರು ಸುತ್ತಿನ ಸಂದರ್ಶನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಗೂಗಲ್‌ನಲ್ಲಿ ತಮ್ಮ ಕನಸಿನ ಉದ್ಯೋಗವನ್ನು ಗಿಟ್ಟಿಸಿಕೊಂಡರು. ಇದರೊಂದಿಗೆ ಅವರಿಗೆ ಬರೋಬ್ಬರಿ 500 ಪ್ರತಿಶತ ಸಂಬಳ ಹೆಚ್ಚಳವೂ ಲಭಿಸಿದೆ ! ಸಾಗರ್ ಕುಮಾರ್ ಪ್ರಸ್ತುತ ಗೂಗಲ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಯಶಸ್ಸಿನ ಕಥೆ ಅನೇಕ ಯುವ ಇಂಜಿನಿಯರ್‌ಗಳಿಗೆ ಸ್ಫೂರ್ತಿಯ ಸೆಲೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read