ಹಾವೇರಿ: ಪ್ರಾಧಿಕಾರದ ಅನುಮೋದನೆ ಇಲ್ಲದೇ ಅನಧಿಕೃತ ಬಡಾವಣೆಗಳಲ್ಲಿ ಸಾರ್ವಜನಿಕರು ನಿವೇಶನಗಳನ್ನು ಖರೀದಿಸಬಾರದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಅನೇಕ ಕಡೆಗಳಲ್ಲಿ ಅನಧಿಕೃತ ಬಡಾವಣೆಗಳು ತಲೆ ಎತ್ತುತ್ತಿವೆ. ಸೂಕ್ತ ಆಕ್ಷನ್ ಪ್ಲಾನ್ ಇರುವುದಿಲ್ಲ. ಪ್ರಾಧಿಕಾರಗಳು ಅನುಮೋದನೆ ನೀಡಿರುವುದಿಲ್ಲ. ಅಂತಹ ನಿವೇಶನಗಳನ್ನು ಸಂಪೂರ್ಣ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ನಿವೇಶನಗಳನ್ನು ಖರೀದಿಸಿದವರಿಗೂ ತೊಂದರೆಯಾಗಬಹುದು ಎಂದು ಹೇಳಿದ್ದಾರೆ.
ಅನಧಿಕೃತ ಬಡಾವಣೆಗಳಲ್ಲಿನ ನಿವೇಶನಗಳಿಗೆ ಸರ್ಕಾರದ ಯಾವುದೇ ಸೌಲಭ್ಯ ಸಿಗುವುದಿಲ್ಲ. ಹೀಗಾಗಿ ಸಾರ್ವಜನಿಕರು ನಿವೇಶನ ಖರೀದಿಸಬಾರದು, ಖರೀದಿಸಿದಲ್ಲಿ ನಿವೇಶನ ಕಳೆದುಕೊಳ್ಳುತ್ತೀರಿ ಎಂದು ಹೇಳಿದ್ದಾರೆ.