ಬೆಂಗಳೂರು: ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಕ್ರೀಡಾ ಕೋಟಾದಡಿ ಸೀಟು ಪಡೆಯಲು ಬಯಸಿದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಮೇ 6ರಿಂದ 20ರವರೆಗೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ತಿಳಿಸಿದೆ.
ಯಾವ ಕ್ರೀಡೆಗಳಲ್ಲಿ ಭಾಗವಹಿಸಿದವರು ಕ್ರೀಡಾಕೂಟಕ್ಕೆ ಅರ್ಹರು ಎಂಬುದರ ಪೂರ್ಣ ಮಾಹಿತಿಯನ್ನು ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಅರ್ಹರು ವೆಬ್ಸೈಟ್ ನಲ್ಲಿರುವ ಲಿಂಕ್ ಗೆ ಹೋಗಿ ದಿನಾಂಕ ಮತ್ತು ಸಮಯವನ್ನು ಮುಂಗಡವಾಗಿ ಕಾಯ್ದಿರಿಸಿಕೊಂಡು ಪರಿಶೀಲನೆಗಾಗಿ ಪ್ರಾಧಿಕಾರದ ಕಚೇರಿಗೆ ಬರಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಕ್ರೀಡಾ ಪ್ರವರ್ಗದಲ್ಲಿ ವಿದ್ಯಾರ್ಥಿಗಳ ಅರ್ಹತೆ ನಿರ್ಣಯಿಸುವುದಕ್ಕೆ ಸಂಬಂಧಿಸಿದಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳ ತೀರ್ಮಾನವೇ ಅಂತಿಮವಾಗಿರುತ್ತದೆ. ಈ ವಿಷಯದಲ್ಲಿ ಪ್ರಾಧಿಕಾರದ ಪಾತ್ರ ಏನೂ ಇರುವುದಿಲ್ಲ ಎಂದು ಕೆಇಎ ನಿರ್ದೇಶಕ ಪ್ರಸನ್ನ ಅವರು ಸ್ಪಷ್ಟಪಡಿಸಿದ್ದಾರೆ.