ಮಂಗಳೂರು: ವಿಧವೆಯಿಂದ ಲಂಚ ಸ್ವೀಕರಿಸುತ್ತಿದ್ದ ಖಜಾನೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.
ಬಂಟ್ವಾಳ ಖಜಾನೆ ಮುಖ್ಯ ಲೆಕ್ಕಿಗ ಹಾಗೂ ಎಫ್ ಡಿಎ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ವಿಧವೆಯಿಂದ 5 ಸಾವಿರ ರೂಪಾಯಿ ಲಂಚ ಪಡೆಯುವಾಗ ಇಬ್ಬರೂ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ದೂರುದಾರ ಮಹಿಳೆಯ ಪತಿ ಬಂಟ್ವಾಳ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿದ್ದರು. 2023ರ ಅಕ್ಟೋಬರ್ ನಲ್ಲಿ ವಯೋನಿವೃತ್ತಿ ಪಡೆದಿದ್ದರು. 2024ರ ಜೂನ್ ನಲ್ಲಿ ಮೃತಪಟ್ಟಿದ್ದರು. ಮಹಿಳೆ ಮುಖ್ಯ ಲೆಕ್ಕಿಗರ ಬಳಿ ಪತಿಯ ಮರಣ ಉಪದಾನ ನೀಡುವಂತೆ ಕೇಳಿದ್ದರು. ಎರಡು ಬಾರಿ ಖಜಾನೆಗೆ ಹೋಗಿ ವಿಚಾರಿಸಿದರೂ ಕೆಲಸ ಮಾಡದೇ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಮಹಿಳೆ ಮಂಗಳೂರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಮಹಿಳೆಯಿಂದ ಲಂಚದ ಹಣ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಬಂಟ್ವಾಳ ಖಾಜಾನೆ ಮುಖ್ಯ ಲೆಕ್ಕಿಗ ಭಾಸ್ಕರ್, ಎಫ್ ಡಿಎ ಬಸವೇಗೌಡ ಇಬ್ಬರನ್ನೂ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.