ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗೆ ದೊಡ್ಡ ಹೊಡೆತವಾಗಿ ಭಾರತೀಯ ಸೇನೆಯು ಮಂಗಳವಾರ ಶೋಪಿಯಾನ್ ಜಿಲ್ಲೆಯ ದಟ್ಟವಾದ ಕೆಲ್ಲರ್ ಅರಣ್ಯ ಪ್ರದೇಶದಲ್ಲಿ ಎನ್ ಕೌಂಟರ್ ನಡೆಸಿದೆ.
ಎನ್ ಕೌಂಟರ್ ನಲ್ಲಿ ಮೂವರು ಲಷ್ಕರ್-ಎ-ತೈಬಾ(ಎಲ್‌ಇಟಿ) ಭಯೋತ್ಪಾದಕರನ್ನು ಕೊಂದಿದ್ದು, “ಆಪರೇಷನ್ ಕೆಲ್ಲರ್” ಎಂಬ ಸಂಕೇತನಾಮ ಹೊಂದಿರುವ ಈ ಕಾರ್ಯಾಚರಣೆಯನ್ನು ಶೋಕಲ್ ಕೆಲ್ಲರ್ ಪ್ರದೇಶದಲ್ಲಿ ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿಯ ನಂತರ ಪ್ರಾರಂಭಿಸಲಾಯಿತು.
ನಿಖರವಾದ ಗುಪ್ತಚರ ಮಾಹಿತಿಯ ಮೇರೆಗೆ ತಕ್ಷಣವೇ ಕಾರ್ಯನಿರ್ವಹಿಸಿದ ರಾಷ್ಟ್ರೀಯ ರೈಫಲ್ಸ್‌ನ ಘಟಕಗಳು ಕಾರ್ಯಾಚರಣೆಯನ್ನು ಮುನ್ನಡೆಸಿದವು. ಪಡೆಗಳು ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ, ಭಯೋತ್ಪಾದಕರಿಂದ ತೀವ್ರವಾದ ಗುಂಡಿನ ಚಕಮಕಿ ನಡೆದಿದೆ.
ದಟ್ಟವಾದ ಅರಣ್ಯ ಪ್ರದೇಶದಲ್ಲಿ ಭೀಕರ ಗುಂಡಿನ ಚಕಮಕಿ ನಂತರ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಯಿತು. ಭದ್ರತಾ ಪಡೆಗಳು ನಂತರ ಅವರ ಶವಗಳನ್ನು ವಶಪಡಿಸಿಕೊಂಡವು.
ಎನ್ಕೌಂಟರ್‌ನಲ್ಲಿ ಸಾವನ್ನಪ್ಪಿದವರನ್ನು ಅನಂತ್‌ನಾಗ್‌ನ ಸ್ಥಳೀಯ ಹುಸೇನ್ ಥೋಕರ್ ಮತ್ತು ಇತರ ಇಬ್ಬರು ಅಲಿ ಭಾಯ್ ಅಥವಾ ತಲ್ಹಾ ಭಾಯ್ ಮತ್ತು ಹಾಸಿಮ್ ಮೂಸಾ ಅಲಿಯಾಸ್ ಸುಲೇಮಾನ್ ಪಾಕಿಸ್ತಾನಿ ಭಯೋತ್ಪಾದಕರು ಎಂದು ಗುರುತಿಸಲಾಗಿದೆ. ಈ ಮೂವರೂ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದರು ಮತ್ತು ಈ ಪ್ರದೇಶದಲ್ಲಿ ಹಲವಾರು ಭಯೋತ್ಪಾದನಾ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು.
‘ಆಪರೇಷನ್ ಕಿಲ್ಲರ್’ ಮೇ 7 ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ) ದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸಶಸ್ತ್ರ ಪಡೆಗಳು ಪ್ರಾರಂಭಿಸಿದ ಪ್ರಮುಖ ದಾಳಿ ‘ಆಪರೇಷನ್ ಸಿಂಧೂರ್’ ನಂತರ ಬಂದಿದೆ. ಆಪರೇಷನ್ ಕೆಲ್ಲರ್‌ನ ಯಶಸ್ಸು ಕಣಿವೆಯಲ್ಲಿ ಭಾರತದ ನಿರಂತರ ಭಯೋತ್ಪಾದನಾ ನಿಗ್ರಹ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುತ್ತದೆ.
ಭಾರತದ ಭಯೋತ್ಪಾದನಾ ನಿಗ್ರಹ ಕಾರ್ಯತಂತ್ರವು ವರ್ಷಗಳಲ್ಲಿ ಪ್ರಮುಖ ರೂಪಾಂತರಕ್ಕೆ ಸಾಕ್ಷಿಯಾಗಿದೆ. 1990 ರ ದಶಕದಲ್ಲಿ ಸಾಂಪ್ರದಾಯಿಕ ಸೇನಾ ಕಾರ್ಯಾಚರಣೆಗಳಿಂದ ಇಂದಿನ ಸರ್ಜಿಕಲ್ ಸ್ಟ್ರೈಕ್‌ಗಳು, ನಿಖರತೆ ಆಧಾರಿತ ಗುಪ್ತಚರ ಕಾರ್ಯಾಚರಣೆಗಳು ಮತ್ತು ಆಧುನಿಕ ಕಣ್ಗಾವಲಿನ ಬಳಕೆಯವರೆಗೆ, ಭಾರತೀಯ ಸಶಸ್ತ್ರ ಪಡೆಗಳು ಬದಲಾಗುತ್ತಿರುವ ಭಯೋತ್ಪಾದನೆ ಬಗ್ಗುಬಡಿಯಲು ಸಜ್ಜಾಗಿವೆ.