ಲಂಡನ್: ವಿಶ್ವದ ಅತಿ ಚಿಕ್ಕ ರಾಷ್ಟ್ರಗಳ ಪಟ್ಟಿಯಲ್ಲಿ ವ್ಯಾಟಿಕನ್ ಸಿಟಿ ಮೊದಲ ಸ್ಥಾನದಲ್ಲಿರುವುದು ಸಾಮಾನ್ಯ. ಆದರೆ, ಅದರ ಹೊರತಾಗಿ ಕೇವಲ ಬೆರಳೆಣಿಕೆಯಷ್ಟು ಜನಸಂಖ್ಯೆಯನ್ನು ಹೊಂದಿರುವ ಹಲವಾರು ಕುತೂಹಲಕಾರಿ ರಾಷ್ಟ್ರಗಳಿವೆ. ಇಂತಹ ಒಂದು ಅಚ್ಚರಿಯ ರಾಷ್ಟ್ರವೆಂದರೆ ಇಂಗ್ಲೆಂಡ್‌ನ ಸಮೀಪ ಉತ್ತರ ಸಮುದ್ರದಲ್ಲಿರುವ ಸ್ವಯಂಘೋಷಿತ ಮೈಕ್ರೋನೇಷನ್ ‘ಸೀಲ್ಯಾಂಡ್’. ಇದರ ಜನಸಂಖ್ಯೆ ಕೇವಲ 27.
ಇಂಗ್ಲಿಷ್ ಭಾಷೆಯನ್ನು ಮಾತನಾಡುವ ಮತ್ತು ‘ಸೀಲ್ಯಾಂಡ್ ಡಾಲರ್’ ಎಂಬ ತನ್ನದೇ ಆದ ಕರೆನ್ಸಿಯನ್ನು ಹೊಂದಿರುವ ಸೀಲ್ಯಾಂಡ್ ಅನೇಕರಿಗೆ ಅಚ್ಚರಿಯನ್ನುಂಟು ಮಾಡುತ್ತದೆ. ಈ ಕರೆನ್ಸಿಯನ್ನು ಅಂತರರಾಷ್ಟ್ರೀಯವಾಗಿ ಮಾನ್ಯ ಮಾಡದಿದ್ದರೂ, ಇಷ್ಟೊಂದು ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಒಂದು ರಾಷ್ಟ್ರದ ಅಸ್ತಿತ್ವವೇ ಸೋಜಿಗ.
ಸೀಲ್ಯಾಂಡ್ ಮೂಲತಃ ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನ್ ಪಡೆಗಳ ವಿರುದ್ಧ ರಕ್ಷಣೆಗಾಗಿ ಬ್ರಿಟಿಷ್ ಸೈನ್ಯ ನಿರ್ಮಿಸಿದ ಬಂದರು. ನಂತರ ಇದನ್ನು ಕೈಬಿಡಲಾಗಿತ್ತು. ಸೆಪ್ಟೆಂಬರ್ 2, 1967 ರಂದು ಬ್ರಿಟಿಷ್ ಪ್ರಜೆ ಮೇಜರ್ ಪ್ಯಾಡಿ ರಾಯ್ ಬೇಟ್ಸ್ ಮತ್ತು ಅವರ ಕುಟುಂಬ ಇದನ್ನು ಸ್ವತಂತ್ರ ಮೈಕ್ರೋನೇಷನ್ ಎಂದು ಘೋಷಿಸಿಕೊಂಡರು. ಕಾಲಾನಂತರದಲ್ಲಿ, ರಾಯ್ ಬೇಟ್ಸ್ ಅವರನ್ನು ಅಕ್ಟೋಬರ್ 9, 2012 ರಂದು ರಾಜ ಎಂದು ಘೋಷಿಸಲಾಯಿತು. ಅವರ ಮರಣದ ನಂತರ, ಅವರ ಮಗ ಮೈಕಲ್ ಆಡಳಿತಗಾರನಾಗಿ ಅಧಿಕಾರ ವಹಿಸಿಕೊಂಡರು.
ಬೇರೆ ಯಾವುದೇ ದೇಶವು ಸೀಲ್ಯಾಂಡ್ ಅನ್ನು ಅಧಿಕೃತವಾಗಿ ಗುರುತಿಸದಿದ್ದರೂ, ಅದರ ಮೈಕ್ರೋನೇಷನ್ ಸ್ಥಾನ ಹಾಗೆಯೇ ಉಳಿದಿದೆ. ಇದು ತನ್ನದೇ ಆದ ಧ್ವಜ, ರಾಜಧಾನಿ, ಪಾಸ್‌ಪೋರ್ಟ್, ಕರೆನ್ಸಿ ಮತ್ತು ರಾಜಮನೆತನವನ್ನು ಹೊಂದಿದೆ. ಆದ್ದರಿಂದ, ಕೇವಲ 27 ನಿವಾಸಿಗಳನ್ನು ಹೊಂದಿರುವ ದೇಶದ ಬಗ್ಗೆ ಕೇಳಿದರೆ, ಸೀಲ್ಯಾಂಡ್ ಅನ್ನು ನೀವು ಖಚಿತವಾಗಿ ಹೆಸರಿಸಬಹುದು. ಆದರೆ, ಇದು ಸ್ವಯಂಘೋಷಿತ ಮೈಕ್ರೋನೇಷನ್ ಮತ್ತು ಜಾಗತಿಕ ಸಮುದಾಯದಿಂದ ಅಧಿಕೃತವಾಗಿ ಗುರುತಿಸಲ್ಪಟ್ಟಿಲ್ಲ ಎಂಬುದನ್ನು ನೆನಪಿಡಿ.