ಹುಬ್ಬಳ್ಳಿ: ಬಾಲಕರಿಬ್ಬರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಡಿಜೆ ಮತ್ತು ಲೈಟಿಂಗ್ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ 9ನೇ ತರಗತಿ ಬಾಲಕನಿಗೆ 6ನೇ ತರಗತಿಯ ಹುಡುಗ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಹುಬ್ಬಳ್ಳಿಯ ಗುರುಸಿದ್ದೇಶ್ವರ ನಗರದಲ್ಲಿ ಸೋಮವಾರ ಘಟನೆ ನಡೆದಿದೆ. 15 ವರ್ಷದ ಬಾಲಕ ಚೇತನ್ ಕೊಲೆಯಾಗಿದ್ದು, ಆರನೇ ತರಗತಿಯ 12 ವರ್ಷದ ಬಾಲಕ ಮನೆಗೆ ಹೋಗಿ ಚಾಕು ತಂದು ಬಲವಾಗಿ ಇರಿದು ಕೊಲೆ ಮಾಡಿದ್ದಾನೆ.
ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಚೇತನ್ ನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ನನ್ನ ಜೀವನದಲ್ಲಿ ಇಂತಹ ಘಟನೆ ನೋಡಿಲ್ಲ. 6ನೇ ತರಗತಿ ಬಾಲಕನಿಗೆ ಕೊಲೆ ಮಾಡುವ ಮನಸ್ಥಿತಿ ಬಂದಿದೆ ಎನ್ನುವುದೇ ಆಘಾತಕಾರಿಯಾಗಿದೆ. ಕೊಲೆಯಾದ ಬಾಲಕ ಎಂಟನೇ ತರಗತಿ ಪಾಸಾಗಿದ್ದಾನೆ. ತಂದೆ, ತಾಯಿಗೆ ಒಬ್ಬನೇ ಮಗನಾಗಿದ್ದು, ಪೋಷಕರು ರೊಟ್ಟಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಈ ಘಟನೆ ಹೃದಯವಿದ್ರಾವಕವಾಗಿದೆ. ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ಬಾಲ ಮಂದಿರಕ್ಕೆ ಕಳುಹಿಸಿದ್ದಾರೆ. ತನಿಖೆ ಮುಂದುವರೆದಿದೆ.