ರಾಜ್ಯದಲ್ಲಿ ಮತ್ತೆ ದುಷ್ಕರ್ಮಿಗಳ ಅಟ್ಟಹಾಸ: ಹಸುವಿನ ಕೆಚ್ಚಲು ಕತ್ತರಿಸಿ ಕ್ರೌರ್ಯ

ಚಿಕ್ಕಮಗಳೂರು: ಕಿಡಿಗೇಡಿಗಳು ಹಸುವಿನ ಕೆಚ್ಚಲು ಕತ್ತರಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ತಮ್ಮಿಹಳ್ಳಿಯಲ್ಲಿ ನಡೆದಿದ್ದು, ಶನಿವಾರ ಬೆಳಕಿಗೆ ಬಂದಿದೆ.

ಚೌಳಹಿರಿಯೂರಿನ ತಮ್ಮಿಹಳ್ಳಿ ಗ್ರಾಮದ ಶೇಖರಪ್ಪ ಅವರಿಗೆ ಸೇರಿದ 20 ಹಸುಗಳನ್ನು ಕಳ್ಳರು ತಂತಿ ಬೇಲಿಯೊಳಗೆ ಕೂಡಿಹಾಕಿ ಬೇರೆ ಕಡೆ ಸಾಗಿಸಲು ಪ್ರಯತ್ನಿಸಿದ್ದಾರೆ. ಆದರೆ, ಆ ಪ್ರಯತ್ನ ವಿಫಲಗೊಂಡಿದ್ದರಿಂದ ಒಂದು ಹಸುವಿನ ಕೆಚ್ಚಲು ಕತ್ತರಿಸಿ ಪರಾರಿಯಾಗಿದ್ದಾರೆ. ಇದರಿಂದಾಗಿ ಹಸು ಸಾವನ್ನಪ್ಪಿದೆ. ಯಗಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

ಈ ಹಿಂದೆ ಜನವರಿ 12ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದು ಕ್ರೌರ್ಯ ಎಸಗಲಾಗಿತ್ತು. ಜನವರಿ 16ರಂದು ಮೈಸೂರು ಜಿಲ್ಲೆ ನಂಜನಗೂಡು ನಂಜುಂಡೇಶ್ವರ ದೇವಾಲಯದ ಬಳಿ ಹರಕೆಗೆ ಬಿಟ್ಟ ಆಕಳು ಕರುವಿನ ಬಾಲವನ್ನು ದುಷ್ಕರ್ಮಿಗಳು ಕತ್ತರಿಸಿದ್ದರು. ಜನವರಿ 20ರಂದು ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಸಾಲ್ಕೋಡ ಗ್ರಾಮದಲ್ಲಿ ಹಸು ಕತ್ತರಿಸಿ ಗರ್ಭದಲ್ಲಿದ್ದ ಕರುವನ್ನು ಎಸೆಯಲಾಗಿತ್ತು. ಜನವರಿ 30ರಂದು ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಗುಂಡ್ಮಿ ಗ್ರಾಮದಲ್ಲಿ ಹಸುವಿನ ಬಾಲ ಕತ್ತರಿಸಲಾಗಿತ್ತು. ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಸುವಿನ ಕೆಚ್ಚಲು ಕೊಯ್ದು ಕಿಡಿಗೇಡಿಗಳು ಕ್ರೌರ್ಯ ಮೆರೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read