ಢಾಕಾ: ಬಾಂಗ್ಲಾದೇಶ ಸೋಮವಾರ ಅಧಿಕೃತವಾಗಿ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಅನ್ನು ರಾತ್ರೋರಾತ್ರಿ ಪರಿಷ್ಕೃತ ಭಯೋತ್ಪಾದನಾ ವಿರೋಧಿ ಕಾನೂನಿನಡಿಯಲ್ಲಿ ವಿಸರ್ಜಿಸಿದೆ.
ಮುಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರವು ಕಾನೂನಿನ ಹಿಂದಿನ ಆವೃತ್ತಿಯ ಅಡಿಯಲ್ಲಿ ಅದರ “ಚಟುವಟಿಕೆಗಳ” ಮೇಲೆ ನಿಷೇಧ ಹೇರಿದ ಎರಡು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.
ಈ ಸಂಬಂಧ ಇಂದು ಗೆಜೆಟ್ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಗೃಹ ಸಲಹೆಗಾರ ಲೆಫ್ಟಿನೆಂಟ್ ಜನರಲ್(ನಿವೃತ್ತ) ಜಹಾಂಗೀರ್ ಆಲಂ ತಿಳಿಸಿದ್ದಾರೆ.
ಅಧಿಸೂಚನೆಯ ಪ್ರಕಾರ, ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ(ICT-BD) ತನ್ನ ನಾಯಕರು ಮತ್ತು ಕಾರ್ಯಕರ್ತರ ವಿಚಾರಣೆಯನ್ನು ಪೂರ್ಣಗೊಳಿಸುವವರೆಗೆ ಅವಾಮಿ ಲೀಗ್ ಮತ್ತು ಅದರ ಅಂಗಸಂಸ್ಥೆಗಳನ್ನು ಭಯೋತ್ಪಾದನಾ ವಿರೋಧಿ ಕಾಯ್ದೆ 2025 ರ ಅಡಿಯಲ್ಲಿ ನಿಷೇಧಿಸಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏತನ್ಮಧ್ಯೆ, ಚುನಾವಣಾ ಆಯೋಗ(EC), ಅವಾಮಿ ಲೀಗ್ನ ನೋಂದಣಿಯನ್ನು ಸಹ ರದ್ದುಗೊಳಿಸಿದೆ. ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಅನರ್ಹಗೊಳಿಸಿದೆ.
ಇಂದು, ಗೃಹ ಸಚಿವಾಲಯವು ಬಾಂಗ್ಲಾದೇಶ ಅವಾಮಿ ಲೀಗ್ ಮತ್ತು ಅದರ ಅಂಗಸಂಸ್ಥೆಗಳ ಚಟುವಟಿಕೆಗಳನ್ನು ನಿಷೇಧಿಸಿದೆ. ಇದರ ಮುಂದುವರಿದ ಭಾಗವಾಗಿ, ಚುನಾವಣಾ ಆಯೋಗವು ಅವಾಮಿ ಲೀಗ್ನ ನೋಂದಣಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ಚುನಾವಣಾ ಆಯೋಗದ ಕಾರ್ಯದರ್ಶಿ ಅಖ್ತರ್ ಅಹ್ಮದ್ ಸರ್ಕಾರಿ ಅಧಿಸೂಚನೆಯ ನಂತರ ಹೇಳಿದ್ದಾರೆ.