ಶಿವಮೊಗ್ಗ: ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವಿರುದ್ಧ ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದ ವ್ಯಕ್ತಿಯ ವಿರುದ್ಧ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ಮೇ 7ರಂದು ಆಪರೆಷನ್ ಸಿಂಧೂರ ಹೆಸರಲ್ಲಿ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ದಾಳಿ ಕುರಿತ ವಿಡಿಯೋ ತುಣುಕನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದ ಆರೋಪದ ಮೇರೆಗೆ ಶಿವಮೊಗ್ಗದ ಇಬ್ಬು ಅಲಿಯಾಸ್ ಇಬ್ರಾಹಿಂ ಖಾನ್ ಎಂಬಾತನ ವಿರುದ್ಧ ಕೇಸ್ ದಾಖಲಾಗಿದೆ.
ಕಾನ್ಸ್ ಟೇಬಲ್ ಪ್ರಕಾಶ್ ಎಂಬುವವರು ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಇಬ್ಬು ಅಲಿಯಾಸ್ ಇಬ್ರಾಹಿಂ ವಿರುದ್ಧ ಪ್ರಕರಣ ದಾಖಲಾಗಿದೆ. ಭಾರತದ ಪ್ರಜೆಯಾಗಿ ಪಾಕಿಸ್ತಾನದ ಪರ ದೇವರಲ್ಲಿ ಬೇಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಕಾನ್ಸ್ ಟೇಬಲ್ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.