ಬಂದಾ: ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು 4 ತಿಂಗಳ ಮಗನನ್ನು ಕೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಉತ್ತರ ಪ್ರದೇಶದ ಬಂದಾ ಸಮೀಪದ ಅತಾರಾ ಪಟ್ಟಣದಲ್ಲಿ ಘಟನೆ ನಡೆದಿದೆ. ಆಜಾದ್ ನಗರ ಮೊಹಲ್ಲಾದಲ್ಲಿರುವ ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಮಾಲೀಕ ರಾಮಕುಮಾರ್ ಪ್ರಜಾಪತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದು ಬೀಗ ಹಾಕಿದ ಕೊಠಡಿಯನ್ನು ತೆರೆದಾಗ ಜಿತೇಂದ್ರ(23), ಅವರ ಪತ್ನಿ ಗೌರಾ(20) ಮತ್ತು ಅವರ ನಾಲ್ಕು ತಿಂಗಳ ವಯಸ್ಸಿನ ಶಿಶುವಿನ ಶವಗಳು ಪತ್ತೆಯಾಗಿವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಬಂದಾ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ಪಲಾಶ್ ಬನ್ಸಾಲ್ ಹೇಳಿದರು.
ಆಹಾರದ ವಿಷಯವಾಗಿ ಜಿತೇಂದ್ರ ತನ್ನ ಪತ್ನಿ ಗೌರಾಳ ಕತ್ತು ಹರಿತವಾದ ಆಯುಧದಿಂದ ಸೀಳಿದ್ದಾನೆ ಎಂದು ಪ್ರಾಥಮಿಕ ಸಂಶೋಧನೆಗಳು ಸೂಚಿಸುತ್ತವೆ. ನಂತರ ಅವನು ತಮ್ಮ ನಾಲ್ಕು ತಿಂಗಳ ಮಗನನ್ನು ಕತ್ತು ಹಿಸುಕಿ ಕೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗುರುವಾರದಿಂದ ಕೋಣೆಯೊಳಗೆ ಮೃತದೇಹಳಿದ್ದು, ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಮನೆ ಮಾಲೀಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಜಿತೇಂದ್ರ ಗುಜರಾತ್‌ನ ಅಹಮದಾಬಾದ್‌ನಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅವರ ಕುಟುಂಬವು ಆಜಾದ್ ನಗರ ಪ್ರದೇಶದಲ್ಲಿ ರಾಮ್‌ಕುಮಾರ್ ಪ್ರಜಾಪತಿ ಒಡೆತನದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಜಿತೇಂದ್ರ ಗುರುವಾರ ಅಹಮದಾಬಾದ್‌ನಿಂದ ಅತಾರಾಗೆ ಮರಳಿದ್ದ. ಘಟನೆ ಬಗ್ಗೆ ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.