ಬೆಂಗಳೂರು: ಭಾರತ-ಪಾಕಿಸ್ತಾನಗಳ ನಡುವೆ ಯುದ್ಧದ ಬಿಕ್ಕಟ್ಟು ಉಂಟಾದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಬಿಪಿಎಲ್ ಪಡಿತರ ಚೀಟಿ ಫಲಾನುಭವಿಗಳಿಗೆ ಮೂರು ತಿಂಗಳ ಪಡಿತರವನ್ನು ಮುಂಗಡವಾಗಿ ವಿತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ನ್ಯಾಯಬೆಲೆ ಅಂಗಡಿಗಳ ಮೂಲಕ ಫಲಾನುಭವಿಗಳಿಗೆ ಪಡಿತರ ವಿತರಿಸಲು ಕೇಂದ್ರ ಸರ್ಕಾರ ಆದೇಶ ನೀಡಿದೆ. ಮೂರು ತಿಂಗಳ ಅವಧಿಗೆ ಆಹಾರ ಧಾನ್ಯಗಳನ್ನು ಮುಂಗಡವಾಗಿ ಭಾರತೀಯ ಆಹಾರ ನಿಗಮದ ಗೋದಾಮುಗಳಿಗೆ ಸಾಗಿಸಲು ಕ್ರಮ ಕೈಗೊಳ್ಳಲಾಗಿದೆ.
ಮುಂಗಾರು ಮಳೆ ಆಗಮನ ಹಿನ್ನೆಲೆಯಲ್ಲಿ ಪ್ರತಿ ಮನೆಗೂ ಆಹಾರ ಭದ್ರತೆ ಒದಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಭಾರಿ ಮಳೆಯ ಸಂದರ್ಭದಲ್ಲಿ ದುರ್ಗಮ ಪ್ರದೇಶದಲ್ಲಿ ಸಂಪರ್ಕ ಕಡಿತಗೊಂಡು ಉಂಟಾಗುವ ಅಡೆತಡೆ ನಿವಾರಿಸುವುದು ಈ ಉದ್ದೇಶವಾಗಿದೆ.
ನ್ಯಾಯಬೆಲೆ ಅಂಗಡಿಗಳಲ್ಲಿ ಬಿಪಿಎಲ್ ಕಾರ್ಡ್ ಪ್ರತಿ ಸದಸ್ಯರಿಗೆ ತಲಾ 15 ಕೆಜಿ ಅಕ್ಕಿ ಸಿಗಲಿದೆ. ಜೂನ್, ಜುಲೈ, ಆಗಸ್ಟ್ ಅವಧಿಗೆ ಆಹಾರ ಭದ್ರತೆ ಕಾಯ್ದೆಯಡಿ ಪಡಿತರ ಹಂಚಿಕೆಗೆ ಸಂಬಂಧಿಸಿದಂತೆ ಭಾರತೀಯ ಆಹಾರ ನಿಗಮ ಆಹಾರ ಪದಾರ್ಥಗಳ ಬೇಡಿಕೆ ವಿವರಗಳನ್ನು ಸಿದ್ಧಪಡಿಸಿದೆ.
ಕೇಂದ್ರ ಸರ್ಕಾರ ಮುಂಗಡವಾಗಿ ಆಹಾರಧಾನ್ಯ ವಿತರಿಸುತ್ತಿದ್ದು, ರಾಜ್ಯದ ಪಾಲು ತಲಾ ಐದು ಕೆಜಿ ಅಕ್ಕಿ ವಿತರಿಸಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಒಂದು ವೇಳೆ ಕೇಂದ್ರದ ಸೂಚನೆಯಂತೆ ರಾಜ್ಯ ಸರ್ಕಾರವು ನಿರ್ಧರಿಸಿದಲ್ಲಿ ಬಿಪಿಎಲ್ ಕಾರ್ಡ್ ಸದಸ್ಯರಿಗೆ ತಲಾ 10 ಕೆಜಿ ಧಾನ್ಯದಂತೆ 3 ತಿಂಗಳಿಗೆ 30 ಕೆಜಿ ಧಾನ್ಯ ವಿತರಣೆಯಾಗಲಿದೆ.