ಶ್ರೀನಗರ: ಪಾಕಿಸ್ತಾನ ಸೇನೆ ಜಮ್ಮು-ಕಾಶ್ಮೀರದ ಗಡಿಯುದ್ಧಕ್ಕೂ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದು, 15 ಕಾಶ್ಮೀರಿ ನಾಗರಿಕರು ಸಾವನ್ನಪ್ಪಿದ್ದಾರೆ.
ಜಮ್ಮು-ಕಾಶ್ಮೀರದ ನಾಲ್ಕು ವಲಯಗಳಲ್ಲಿ ಪಾಕಿಸ್ತಾನ ಸೇನೆ ಪದೇ ಪದೇ ಕದನವಿರಾಮ ಉಲ್ಲಂಘನೆ ಮಾಡಿ ಶೆಲ್ ದಾಳಿ ನಡೆಸುತ್ತಿದೆ. ಪಾಕ್ ಸೇನೆಯ ನಿರಂತರ ದಾಳಿ 15 ಜನರು ಬಲಿಯಾಗಿದ್ದಾರೆ. 54 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಭಾರತೀಯ ಸೇನೆ ಕೂಡ ತಕ್ಕ ಪ್ರತ್ಯುತ್ತರ ನೀಡುವ ಮೂಲಕ ಪ್ರತಿ ದಾಳಿ ನಡೆಸುತ್ತಿದೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಭಾಗವಾಗಿ ಭಾರತೀಯ ಸೇನೆ ಪಾಕ್ ನೆಲದಲ್ಲಿ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಪಾಕ್ ಸೇನೆ ಜಮ್ಮು-ಕಾಶ್ಮೀರದ ಗ್ರಾಮಗಳನ್ನು ಗುರಿಯಾಗಿಸಿಕೊಂಡು ಫಿರಂಗಿ, ಶೆಲ್ ದಾಳಿ ನಡೆಸುತ್ತಿದೆ.
ಮೇ 7ರಿಂದ ಜಮ್ಮು-ಕಾಶ್ಮೀರದ ಕುಪ್ವಾರಾ, ಬಾರಾಮುಲ್ಲಾ, ಉರಿ, ಅಖ್ನೂರ್ ವಲಯಗಳಲ್ಲಿ ಎಲ್ ಒಸಿಯುದ್ದಕ್ಕೂ ಫಿರಂಗಿ, ಶಸ್ತ್ರಾಸ್ತ್ರಗಳ ಮೂಲಕ ನಿರತರ ದಾಳಿ ನಡೆಸುತ್ತಿದೆ. ಪಾಕಿಸ್ತಾನ ಸೇನೆಯಿಂದ ಪದೇ ಪದೇ ಗುಂಡಿನ ದಾಳಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವೆಲ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಗಡಿಯಲ್ಲಿ ಪಾಕ್ ಸೇನೆ ನಡೆಸುತ್ತಿರುವ ಅಪ್ರಚೋದಿತ ಗುಂಡಿನ ದಾಳಿ ಹಾಗೂ ಭಾರತೀಯ ಸೇನೆಯ ಪ್ರತ್ಯುತ್ತರದ ಬಗ್ಗೆ ಮಾಹಿತಿ ನೀಡಿದ್ದಾರೆ.